ದಾವಣಗೆರೆ : ದಾವಣಗೆರೆಯ ಬೆಣ್ಣೆದೋಸೆ ತಿಂಡಿಗಳಲ್ಲಿ ಖ್ಯಾತಿ ಗಳಿಸಿದೆ. ಅದೇ ರೀತಿ ಇಲ್ಲಿನ ರೈತರು ಬೆಳೆಯುವ ಎಳನೀರು ಕೂಡ ಹೊರ ರಾಜ್ಯಗಳಲ್ಲಿ ಅಷ್ಟೇ ಹೆಸರುವಾಸಿ. ತೋಟಗಳಲ್ಲಿ ಬೆಳೆದ ಸಿಹಿ ನೀರಿನ ಎಳನೀರಿಗೆ ಭಾರಿ ಬೇಡಿಕೆ ಇದೆ.
ಲೋಡ್ಗಟ್ಟಲೆ ಎಳನೀರು ದಾವಣಗೆರೆಯಿಂದ ಬೇರೆ ಬೇರೆ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಈ ಬಾರಿ ಬರಗಾಲ ಇರುವುದರಿಂದ ಎಳನೀರಿನ ಫಸಲು ಕಡಿಮೆ ಆಗಿದೆ. ಆದ್ರೂ ಹೊರರಾಜ್ಯಗಳಿಗೆ ಮೂರ್ನಾಲ್ಕು ದಿನಕ್ಕೊಮ್ಮೆ ಒಂದು ಲೋಡ್ ಎಳನೀರು ದಾವಣಗೆರೆಯಿಂದ ಹೊರರಾಜ್ಯಗಳಿಗೆ ಹೋಗುತ್ತಿದೆ. ದಾವಣಗೆರೆ ತಾಲೂಕಿನ ಜರೇಕಟ್ಟೆ ಗ್ರಾಮ ಹೊರರಾಜ್ಯಗಳಿಗೆ ಎಳನೀರು ಪೂರೈಸುವ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ.
ಎಳನೀರು ದರ ಗಗನಕ್ಕೆ, ಹೊರರಾಜ್ಯಗಳಲ್ಲಿ ಬೇಡಿಕೆ: ''ಎಳನೀರು ಬೆಲೆ ಗಗನಕ್ಕೆ ಏರಿಕೆ ಆಗಿದ್ರು ಕೂಡ ದಾವಣಗೆರೆ ಸಿಹಿ ಎಳನೀರಿಗೆ ಹೊರರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಮಳೆ ಇಲ್ಲದ ಕಾರಣ ಫಸಲು ಕಡಿಮೆಯಾಗಿದೆ. ಮೊದಲೆಲ್ಲ ಒಂದು ದಿನಕ್ಕೆ ಎರಡು ಲೋಡ್ ಎಳನೀರು ಕಳುಸುತ್ತಿದ್ದೆವು. ಇದೀಗ ಎಳನೀರು ಅಭಾವ ಇರುವ ಕಾರಣ ಮೂರ್ನಾಲ್ಕು ದಿನಗಳಿಗೆ ಒಂದು ಲೋಡ್ ರಫ್ತು ಮಾಡಲಾಗುತ್ತಿದೆ. ರೂ. 28-30 ರಂತೆ ಎಳನೀರು ದಾವಣಗೆರೆಯಲ್ಲಿ ಖರೀದಿ ಮಾಡಲಾಗುತ್ತಿದೆ'' ಎಂದು ವ್ಯಾಪಾರಿ ಮಂಜುನಾಥ್ ಹೇಳಿದರು.
ಜಿಲ್ಲೆಯ ಚನ್ನಗಿರಿ, ಭರಮಸಾಗರ, ಬಸವಪಟ್ಟಣ, ಸೂಳೆಕೆರೆ, ಹರೋಸಾಗರ, ಜರೇಕಟ್ಟೆ ಗ್ರಾಮದ ತೋಟಗಳಿಂದ ಎಳನೀರು ತಂದು ರಫ್ತು ಮಾಡಲಾಗುತ್ತದೆ. ಟ್ರಾನ್ಸ್ಪೋರ್ಟ್ಗೆ ತಗಲುವ ಖರ್ಚು ವೆಚ್ಚದಿಂದ, ಖರೀದಿ ಸೇರಿ ಎಳನೀರು ದರ ಏರಿಕೆಯಾಗಿದೆ. ಮಹಾರಾಷ್ಟ್ರ, ಪುಣೆ, ಮಧ್ಯಪ್ರದೇಶ, ದೆಹಲಿ, ಗೋವಾಕ್ಕೆ ದಾವಣಗೆರೆ ಜಿಲ್ಲೆಯ ಜರೇಕಟ್ಟೆ ಗ್ರಾಮದಿಂದ ಲೋಡ್ ಮಾಡಿ ಎಳನೀರು ರಪ್ತು ಮಾಡಲಾಗುತ್ತದೆ" ಎಂದು ತಿಳಿಸಿದರು.
ತೋಟಗಳಲ್ಲಿ ಎಳನೀರು ಸಿಗುತ್ತಿಲ್ಲ, ನೂರು ಎಳನೀರು ಸಿಕ್ಕರೆ ಹೆಚ್ಚು : ಈ ಬಗ್ಗೆ ಎಳನೀರು ಇಳಿಸುವ ಮಲ್ಲೇಶ್ ಅವರು ಮಾತನಾಡಿ, ''ಜರಕಟ್ಟೆಯಿಂದ ಹೊರರಾಜ್ಯಗಳಿಗೆ ಎಳನೀರು ರಫ್ತು ಮಾಡ್ಬೇಕಾದ್ರೆ ಎಳನೀರು ಇಳಿಸುವವರು ದಿನನಿತ್ಯ 500-600 ಎಳನೀರು ಕಿತ್ತು ತಂದು ರಫ್ತು ಮಾಡ್ತಿದ್ರು. ಆದರೆ ತೋಟಗಳಲ್ಲಿ ಎಳನೀರು ಅಭಾವ ಆಗಿದ್ದರಿಂದ ದಿನಕ್ಕೆ ಕೇವಲ 100 ಎಳನೀರು ಲಭ್ಯವಾಗ್ತಿರುವುದು ರಫ್ತಿಗೆ ಕಂಟಕವಾಗಿದೆ'' ಎಂದರು.
"ದಿನನಿತ್ಯ 500-600 ಎಳನೀರು ಕೀಳುತ್ತಿದ್ದೆವು. ಇದೀಗ 100 ಎಳನೀರು ಕಿತ್ತರೆ ಹೆಚ್ಚು. ತೋಟದಲ್ಲಿ 15-16ಕ್ಕೆ ಒಂದು ಎಳನೀರಿಗೆ ದರ ನಿಗದಿ ಮಾಡಿ ನೀಡಲಾಗುತ್ತಿದೆ. ತೋಟದಿಂದ ತಂದು ಹೊರರಾಜ್ಯಕ್ಕೆ 30-35 ರೂಪಾಯಿಗೆ ಒಂದು ಎಳನೀರು ರಫ್ತು ಮಾಡಲಾಗುತ್ತಿದೆ. ನಾವು ನೂರು ಎಳನೀರು ಇಳಿಸಿದ್ರೆ ಒಂದು ಸಾವಿರ ಹಣವನ್ನು ಕೂಲಿಯವರಿಗೆ ಕೊಡ್ಬೇಕಾಗಿದೆ'' ಎಂದು ಹೇಳಿದರು.
ಕೂಲಿ ಹಣ ಹೊಟ್ಟೆ ಬಟ್ಟೆಗೆ ಸಾಕಾಗುವುದಿಲ್ಲ, ಮಳೆ ಇದ್ದಿದ್ರೆ ಒಳ್ಳೆ ಫಸಲು ಸಿಗುತಿತ್ತು. ಇಲ್ಲಿ ಸ್ಥಳೀಯವಾಗಿ ಒಂದು ಎಳನೀರನ್ನು 32 ರೂಪಾಯಿಯಂತೆ ಕೊಡ್ತೇವೆ. ಅವರು ಲಾಭ ಉಳಿಸಿಕೊಂಡು ರೂ. 40 ರಿಂದ 50ಗೆ ಮಾಡ್ತಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಬೇಸಿಗೆ ದಾಹ ತೀರಿಸಲು ಎಳನೀರು ಬೆಸ್ಟ್; ದೇಹ ನಿರ್ಜಲೀಕರಣದಿಂದ ಪಾರು ಮಾಡುತ್ತೆ ಈ ಪಾನೀಯ