ದಾವಣಗೆರೆ : ಬೇಸಿಗೆ ಕಾಲಕ್ಕೂ ಮುನ್ನವೇ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಮಳೆ ಇಲ್ಲದೆ ಅಂತರ್ಜಲದ ಮಟ್ಟ ಪಾತಾಳಕ್ಕೆ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಅಡಿಕೆ ಹಾಗೂ ತೆಂಗಿನ ತೋಟ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ. ದುರಂತ ಎಂದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೆಂಗು ಬೆಳೆಯುವ ರೈತರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಇಡೀ ತೆಂಗಿನ ಮರಗಳು ಕಪ್ಪುತಲೆ ಹುಳು ಕಾಟಕ್ಕೆ ತುತ್ತಾಗಿ ಒಣಗುತ್ತಿವೆ. ಇದರಿಂದ ರೈತ ವರ್ಗ ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ತನಕ ಒಟ್ಟು 2600 ಹೆಕ್ಟೇರ್ ಭೂಮಿಯಲ್ಲಿ ತೆಂಗಿನ ಮರಗಳು ನಾಶವಾಗಿದೆ ಎಂಬ ಮಾಹಿತಿ ತೋಟಗಾರಿಕೆ ಇಲಾಖೆಯಿಂದ ಹೊರಬಿದ್ದಿದೆ.
ಈ ಕಪ್ಪುತಲೆ ಹುಳು ಕಾಟಕ್ಕೆ ಮೊದಲಿಗೆ ತೆಂಗಿನ ಗರಿಗಳು ಒಣಗಿ, ಮರಗಳು ಕಣ್ಣೆದುರಿಗೆ ಧರೆಗುರುಳುತ್ತಿರುವುದರಿಂದ ರೈತರು ಕಂಗೆಟ್ಟಿದ್ದಾನೆ. ಒಳ್ಳೆಯ ಫಸಲು ಕೊಡುವ ಹಂತದಲ್ಲಿದ್ದ ಮರಗಳು ಒಣಗುತ್ತಿರುವುದರಿಂದ ಅನ್ನದಾತ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಾವಣಗೆರೆ ಜಿಲ್ಲೆಯಾದ್ಯಂತ ಒಟ್ಟು 7908 ಸಾವಿರ ಹೆಕ್ಟೇರ್ಗೂ ಅಧಿಕ ತೆಂಗಿನ ತೋಟವಿದೆ. ಈ ಪೈಕಿ 2600 ಹೆಕ್ಟೇರ್ ತೆಂಗಿನ ತೋಟ ಕಪ್ಪು ತಲೆ ಹುಳು ರೋಗಕ್ಕೆ ಬಲಿಯಾಗಿವೆ. ಇನ್ನು ತೇವಾಂಶ ಕೊರತೆ ಮತ್ತು ಬಿಸಿಲಿನಿಂದ ಹೆಚ್ಚುತ್ತಿರುವ ರೋಗಕ್ಕೆ ಪರಿಹಾರವೇ ಇಲ್ಲವೇ ಎಂದು ರೈತರು ತೋಟಗಾರಿಕೆ ಇಲಾಖೆಗೆ ಪ್ರಶ್ನಿಸುತ್ತಿದ್ದಾರೆ. ಇದರಿಂದಾಗಿ ತೋಟಗಾರಿಕೆ ಇಲಾಖೆಯಿಂದ ಕಪ್ಪುತಲೆ ಹುಳು ಬಾಧೆ ನಿಯಂತ್ರಣಕ್ಕೆ ಗೋನಿಯೋಜಸ್ ಹುಳು ತಯಾರು ಮಾಡಲಾಗುತ್ತಿದೆ. ಇದು ಕಪ್ಪುತಲೆ ಹುಳುವನ್ನು ನಾಶಪಡಿಸುತ್ತದೆ.
ದಾವಣಗೆರೆ ತೋಟಗಾರಿಕೆ ಇಲಾಖೆಯಲ್ಲಿ ತಯಾರಾಗ್ತಿದೆ ಹುಳು: ದಾವಣಗೆರೆ ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಪ್ಪುತಲೆ ಹುಳು ತಿನ್ನುವ ಗೋನಿಯೋಜಸ್ ಹುಳು ತಯಾರಾಗುತ್ತಿದೆ. ಈ ಹುಳುವನ್ನು ಪ್ರತಿ 15 ದಿನಕ್ಕೊಮ್ಮೆ ತೆಂಗಿನ ಮರಕ್ಕೆ ಬಿಟ್ಟಾಗ ರೋಗ ಹತೋಟಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಈ ರೋಗ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಉಚಿತ ಗೋನಿಯೋಜಸ್ ಹುಳು ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಮಳೆಯಿಲ್ಲದೆ ಕಂಗಾಲಾಗಿರುವಾಗ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಕಪ್ಪುತಲೆ ಹುಳು ರೋಗ ಬಾಧಿಸುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಈ ಬಗ್ಗೆ ರೈತ ಹೇಮಂತ್ ಕುಮಾರ್ ದಳವಾಯಿ ಎಂಬುವರು ಪ್ರತಿಕ್ರಿಯಿಸಿ, "ಬರಗಾಲ ಆವರಿಸಿದೆ. ಇದರಲ್ಲಿ ಕಪ್ಪು ಹುಳು ಬಾಧೆಯಿಂದ ತೆಂಗು ನಾಶ ಆಗ್ತಿದೆ. 2000ಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ಈ ರೋಗಕ್ಕೆ ತುತ್ತಾಗಿದೆ. ಈ ರೋಗದಿಂದ ತೆಂಗಿನ ಮರದ ಗರಿಗಳು ಒಣಗುತ್ತಿವೆ. ಸರ್ಕಾರ ಮಧ್ಯೆ ಪ್ರವೇಶ ಮಾಡಿ ರೈತರಿಗೆ ಆಸರೆಯಾಗ್ಬೇಕಾಗಿದೆ. ಬರಗಾಲದಿಂದ ರೈತರು ಜೀವನ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಈ ರೋಗ ಆವರಿಸಿರುವುದು ಆತಂಕಕ್ಕೆ ಕಾರಣವಾಗಿದೆ'' ಎಂದರು.
ತೋಟಗಾರಿಕೆ ಅಧಿಕಾರಿಗಳಿಂದ ರೈತರಿಗೆ ಸಲಹೆ : ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿಯಾದ ರೇಷ್ಮಾ ಪರ್ವೀನ್ ಅವರು ಪ್ರತಿಕ್ರಿಯಿಸಿ, "ನಮ್ಮ ಜಿಲ್ಲೆಯಲ್ಲಿ 7908 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. 2600 ಹೆಕ್ಟೇರ್ ಪ್ರದೇಶದ ತೆಂಗಿನ ತೋಟಗಳು ಈ ಕಪ್ಪು ತಲೆ ಹುಳು ರೋಗಕ್ಕೆ ತುತ್ತಾಗಿವೆ. ಈ ರೋಗ ಜನವರಿಯಿಂದ ಆರಂಭವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚಾಗುತ್ತದೆ. ಈ ಹುಳುಗಳು ಹಸಿರು ಭಾಗವನ್ನು ತಿನ್ನುವುದರಿಂದ ಇಡೀ ತೆಂಗಿನ ಗರಿಗಳು ಸಂಪೂರ್ಣವಾಗಿ ಒಣಗುತ್ತಿವೆ. ಈ ಹುಳುಗಳನ್ನು ನಿಯಂತ್ರಿಸಲು ಗೋನಿಯೋಜಸ್ ಹುಳುಗಳನ್ನು ಇಲಾಖೆಯಲ್ಲಿ ತಯಾರು ಮಾಡಿ, ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರೈತರು ಈ ಹುಳುಗಳನ್ನು ತೆಂಗಿನ ಮರದಲ್ಲಿ 15 ದಿನಕ್ಕೊಮ್ಮೆ ಬಿಡುತ್ತಿದ್ದರೆ ಈ ರೋಗವನ್ನು ನಿಯಂತ್ರಿಸಬಹುದಾಗಿದೆ'' ಎಂದು ರೈತರಿಗೆ ಸಲಹೆ ನೀಡಿದರು.
ಇದನ್ನೂ ಓದಿ : ತುಮಕೂರು: ರೋಗಗ್ರಸ್ತ ತೆಂಗಿನ ಮರಗಳನ್ನ ಕಡಿದು ಹಾಕುತ್ತಿರುವ ರೈತರು