ಹಾಸನ (ಸಕಲೇಶಪುರ) : ಮನೆಯ ಫ್ಯಾನ್ನಲ್ಲಿ ನಾಗರಹಾವು ಕಾಣಿಸಿಕೊಂಡ ಹಿನ್ನೆಲೆ ಮನೆಯ ಕುಟುಂಬಸ್ಥರು ಕೆಲ ಕಾಲ ಗಾಬರಿಗೊಂಡಿದ್ದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಸಕಲೇಶಪುರ ಪಟ್ಟಣದ ಹಳೆ ಸಂತವೇರಿ ಬಡಾವಣೆಯಲ್ಲಿರುವ ಮನೆಯ ಅಟ್ಟದ ಮೇಲಿನ ಫ್ಯಾನ್ವೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಕುಟುಂಬದ ಸದಸ್ಯರು ಭಯಭೀತರಾಗಿದ್ದಾರೆ.
ಮನೆಯಲ್ಲಿ ಫ್ಯಾನ್ ಹಾಕುತ್ತಿದ್ದಂತೆ ವಿಚಿತ್ರ ಶಬ್ಧ ಕೇಳಿಸಿದೆ. ಬುಸುಗುಡುವ ಶಬ್ಧ ಬಂದ ಹಿನ್ನೆಲೆ ಫ್ಯಾನ್ ಆಫ್ ಮಾಡಿ ನೋಡಿದಾಗ ನಾಗರಹಾವೊಂದು ಕಾಣಿಸಿಕೊಂಡಿದೆ. ಹಾವಿನ ಬಣ್ಣ ಮತ್ತು ಫ್ಯಾನ್ನ ಬಣ್ಣ ಒಂದೇ ರೀತಿ ಇದ್ದುದರಿಂದ ನಾಗರಹಾವನ್ನು ಹುಡುಕುವುದಕ್ಕೆ ಸ್ವಲ್ಪ ಸಮಯ ಹಿಡಿದಿದೆ. ಶಿವನ ಕೊರಳಿನಲ್ಲಿ ಸುತ್ತಿಕೊಂಡ ರೀತಿ ನಾಗರಹಾವು ಸುತ್ತಿಕೊಂಡಿದ್ದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ.
ಮತ್ತೆ ಫ್ಯಾನ್ ಆನ್ ಮಾಡುತ್ತಿದ್ದಂತೆ ಹೆಡೆ ಎತ್ತಿ ಬುಸುಗುಟ್ಟಿದ ನಾಗರಹಾವನ್ನು ಉರಗತಜ್ಞ ದಸ್ತಗಿರ್ ಎಂಬುವರು ಸುರಕ್ಷಿತವಾಗಿ ಸಂರಕ್ಷಣೆ ಮಾಡಿ ಸಕಲೇಶಪುರದ ಹೊರವಲಯದ ದೋಣಿಗಲ್ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಹಿಡಿದಿದ್ದರಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಮನೆಯೊಳಗೆ ನುಗ್ಗಿದ 12 ಅಡಿ ಉದ್ದದ ಕಾಳಿಂಗ ಸರ್ಪ!: ವಿಡಿಯೋ ನೋಡಿ - King Cobra