ಬೆಂಗಳೂರು: "ನಾನು ನನ್ನ ಅವಧಿಯಲ್ಲಿ 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ನಾವು ಹಲವು ಪ್ರಕರಣ ಸಿಬಿಐಗೆ ಕೊಡುವಂತೆ ಕೇಳಿದ್ದೆವು. ಅವರೇನಾದ್ರು (ಬಿಜೆಪಿಯವರು) ಒಂದಾದ್ರು ಕೊಟ್ಟಿದ್ರಾ?" ಎಂದು ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮದವರು ಮುಡಾ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಸಿಎಂ ನಿರಾಕರಿಸಿದರು. ವಿಧಾನಸೌಧದ ಒಳಗೆ ಪ್ರವೇಶಿಸುವ ಮೆಟ್ಟುಲುಗಳ ಮೇಲೆಯೇ ನಿಂತು ಮಾತನಾಡಿದ ಅವರು, "ಇದು ಸಿಬಿಐಗೆ ಕೊಡುವ ಪ್ರಕರಣ ಅಲ್ಲ. ಆಮೇಲೆ ಬಂದು ಮಾತಾಡುತ್ತೇನೆ" ಎಂದು ತೆರಳಿದರು.
ಇದೇ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, "ಮುಡಾ ನಿವೇಶನ ಹಂಚಿಕೆಗೆ 50:50 ಅನುಪಾತದ ಆದೇಶ ಮಾಡಿದ್ದು, ಈಗ ನಮ್ಮ ಸರ್ಕಾರ ಅಲ್ಲ. ಯಾರ ಕಾಲದಲ್ಲಿ ಸೈಟುಗಳು ಹಂಚಿಕೆ ಆಗಿವೆ?. ಬಿಜೆಪಿ ಕಾಲದಲ್ಲಿ ಒಂದಾದರೂ ಸಿಬಿಐಗೆ ನೀಡಿದ ಉದಾಹರಣೆ ಇದೆಯಾ?. ತನಿಖೆ ನಡೆಯುತ್ತಿದೆ, ತನಿಖೆ ಆದಮೇಲೆ ಎಲ್ಲ ವಿವರ ಹೊರ ಬರುತ್ತದೆ. ನ್ಯಾಯಯುತವಾಗಿ ಹಂಚಿಕೆ ಮಾಡಿದ್ದಕ್ಕೂ ಸಿಬಿಐಗೆ ನೀಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಡಿಸಿಎಂ ಸ್ಥಾನದ ಆಸೆ ಇಲ್ಲ : ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯೂ ಅಲ್ಲ. ಅದರ ಬಗ್ಗೆ ಆಸೆಯೂ ಇಲ್ಲ. ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೇಗುತ್ತೇನೆ. ಹೆಚ್ಚುವರಿ ಡಿಸಿಎಂಗಳ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ಗೆ ಬಿಟ್ಟಿರುವ ವಿಚಾರ. ಸಿಎಂ, ಡಿಸಿಎಂ ಹುದ್ದೆ ಖಾಲಿ ಇಲ್ಲ ಎಂದರು.
ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಮುಡಾ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಿಬಿಐ ತನಿಖೆಗೆ ಕೊಟ್ಟರೆ ಇಲ್ಲೇನೂ ಮಾಡುವ ಹಾಗಿಲ್ಲವೇ? ಎಂದು ಪ್ರಶ್ನಿಸಿದರು. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭೆ ಕಲಾಪದಲ್ಲಿ ಬಿಜೆಪಿಯವರು ಯಾವ ವಿಷಯ ಚರ್ಚೆಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಸ್ಪೀಕರ್ಗೆ ಯಾವ ವಿಚಾರದ ಬಗ್ಗೆ ಲೆಟರ್ ಕೊಡ್ತಾರೋ ನೋಡಬೇಕು ಎಂದರು.
ಮುಡಾ ಹಗರಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ. ಬಿಜೆಪಿಯವರು ಕೇಳ್ತಾರೆ ಅಂತಾ ಎಲ್ಲವನ್ನೂ ಸಿಬಿಐಗೆ ಕೊಡಲು ಆಗಲ್ಲ. ಬಿಜೆಪಿಯವರಿಗೆ ನಾವು ಉತ್ತರ ಕೊಡುತ್ತೇವೆ. ನಾವು ಹಿಂಜರಿಯುವುದಿಲ್ಲ ಎಂದು ಹೇಳಿದರು.
ಹೊಸ ಕಾಯ್ದೆಗಳಿಗೆ ರಾಜ್ಯ ಸರ್ಕಾರದ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಪ್ರಕಾರ ತರಬೇಕು ಎಂಬ ವಿಚಾರವನ್ನು ಕಾನೂನು ಸಚಿವರು ತಂದಿದ್ದಾರೆ. ಚರ್ಚೆ ಮಾಡುತ್ತೇವೆ. ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕು ಅನ್ನೋ ವಿಚಾರ ಇದು. ಅದನ್ನು ಇವತ್ತು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುತ್ತೇವೆ. ಇಂದಿನ ಕ್ಯಾಬಿನೆಟ್ನಲ್ಲಿ ಹೊಸ ಕಾನೂನು ನೀತಿ ಬಗ್ಗೆ ಚರ್ಚೆ ಆಗುತ್ತದೆ. ಸಭೆ ನಂತರ ಮಾಹಿತಿ ನೀಡಲಾಗುವುದು. ಗ್ರಾಮೀಣ ಮಟ್ಟದಲ್ಲಿ ಜನರಿಗೆ ನ್ಯಾಯ ಸಿಗಬೇಕು. ಹಳ್ಳಿಕಟ್ಟೆ ಅನ್ನೋ ರೀತಿ ಕಾನೂನು ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಬಸವರಾಜ ಬೊಮ್ಮಾಯಿ ಆಕ್ಷೇಪ - basavaraj bommai