ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ ನನ್ನ ತೆರಿಗೆ ನನ್ನ ಹಕ್ಕು ಟ್ವಿಟರ್ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ #ನನ್ನ ತೆರಿಗೆ ನನ್ನ ಹಕ್ಕು ಟ್ವಿಟರ್ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೇ ಉತ್ತರದ ರಾಜ್ಯಗಳ ಪಾಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಋಣದಲ್ಲಿರುವ ಉತ್ತರದ ರಾಜ್ಯಗಳು ಎಂದಿಗೂ ನಮಗೆ ಮಾದರಿ ಆಗಲಾರವು. ಈ ಹುಸಿ ಕಲ್ಪನೆಯಿಂದ ಎಲ್ಲರೂ ಹೊರ ಬರಬೇಕು. ಶ್ರಮದಿಂದ ಸದೃಢ ರಾಷ್ಟ್ರ ಕಟ್ಟುತ್ತಿರುವ ಕರ್ನಾಟಕವೇ ಭಾರತಕ್ಕೆ ಮಾದರಿ ಎಂದಿದ್ದಾರೆ. ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು ಎಂಬಂತಿದೆ ದೇಶದಲ್ಲಿ ಕನ್ನಡಿಗರ ಸ್ಥಿತಿ. ಇದು ಬದಲಾಗಲೇಬೇಕು. ನ್ಯಾಯಕ್ಕಾಗಿ ಧ್ವನಿಯೆತ್ತಿರುವ ನಾಡಿನ ಪ್ರಜ್ಞಾವಂತರಿಗೆ ನನ್ನ ಧನ್ಯವಾದಗಳು. ನಿಮ್ಮ ಜೊತೆ ನಾನಿದ್ದೇನೆ, ನಮ್ಮೆಲ್ಲರ ಧ್ವನಿ ಒಟ್ಟಾದರೆ ದಿಲ್ಲಿವರೆಗೆ ಕೇಳುವುದು ಶತಸಿದ್ಧ' ಎಂದು ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ವಿರುದ್ಧ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಸಂಬಂಧ ಶಿಸ್ತು ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಆಸ್ತಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಪಾಲಿಕೆ ಕಂದಾಯ ವಿಭಾಗ ಹಲವು ರೀತಿಯ ಕಾರ್ಯ ಯೋಜನೆ ರೂಪಿಸಿದೆ. ಇದರಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಗೃಹ ಹಾಗೂ ಗೃಹೇತರ ಕಟ್ಟಡಗಳ ಮಾಲೀಕರ ಆಸ್ತಿ ಮುಟ್ಟುಗೋಲು ಹಾಗೂ ಬೀಗಮುದ್ರೆ ಹಾಕುವುದು ಕೂಡ ಸೇರಿದೆ.
ಈ ಸಂಬಂಧ ಈಗಾಗಲೇ ಪಾಲಿಕೆ ಎಂಟೂ ವಲಯಗಳಲ್ಲಿ ಬಿಬಿಎಂಪಿ ವಲಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಕಟ್ಟದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಬೊಮ್ಮನಹಳ್ಳಿ ವಲಯ, ಬೇಗೂರು, ಯಲಚೇನಹಳ್ಳಿ, ಉತ್ತರಹಳ್ಳಿ, ಹೆಚ್ಎಸ್ಆರ್ ಲೇ ಔಟ್ ಮತ್ತು ಅರಕೆರೆ ಸೇರಿ ಮತ್ತಿತರ ಪ್ರದೇಶಗಳಲ್ಲಿ ಹಲವು ಮಾಲೀಕರು 20 ಲಕ್ಷ ರೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅಂತವರ ವಿರುದ್ಧ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಗ್ಯಾರಂಟಿ, ಬರ, ತೆರಿಗೆ ಸಂಗ್ರಹ ಕುಂಠಿತ ಎಫೆಕ್ಟ್: ಸಾಲದ ಮೊರೆ ಹೋದ ರಾಜ್ಯ ಸರ್ಕಾರ