ಮೈಸೂರು: ಪ್ರಸ್ತುತ ಜಾತಿ- ಧರ್ಮದ ಹೆಸರಿನಲ್ಲಿ ಗಲಾಟೆಗಳು, ಅಶಾಂತಿ ಸೃಷ್ಟಿಯಾಗುತ್ತಿದೆ. ಧರ್ಮ ಇರುವುದು ನಮಗಾಗಿಯೇ ಹೊರತು, ಧರ್ಮಕ್ಕಾಗಿ ನಾವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬುಧವಾರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ದೇಸಿಯ ಆಟಗಳು ಮತ್ತು ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಜಾತಿ, ಧರ್ಮ ಭಾಷೆಯವರು ಪರಸ್ಪರ ಪ್ರೀತಿಯಿಂದ ಜಾತ್ರೆಯಲ್ಲಿ ಭಾಗವಹಿಸಿ ಸೌಹಾರ್ದಯುತವಾಗಿ ನಡೆಯುವಂತೆ ಮಾಡುತ್ತಾರೆ. ಎಲ್ಲಾ ಊರಿನಲ್ಲೂ ಜಾತ್ರೆಗಳು ನಡೆಯುತ್ತವೆ ಆದರೆ ಸುತ್ತೂರು ಜಾತ್ರೆ ವಿಶೇಷವಾಗಿದೆ ಎಂದು ಹೇಳಿದರು.
ಶಿಕ್ಷಣ, ಆರೋಗ್ಯ, ಅನ್ನದಾಸೋಹವನ್ನು ಯಾವುದೇ ಜಾತಿ – ಧರ್ಮವನ್ನು ನೋಡದೆ ಲಕ್ಷಾಂತರ ಜನರಿಗೆ ನೀಡುವ ಮೂಲಕ ಸುತ್ತೂರು ಮಠ ರಾಜ್ಯಕ್ಕೆ ಮಾದರಿಯಾಗಿದೆ. ಈ ರೀತಿಯ ಕೆಲಸಗಳು ಮುಂದುವರೆದು ಇನ್ನೂ ಹೆಚ್ಚಿನ ಬಡ ಜನರಿಗೆ ನೆರವಾಗಬೇಕು. ಇದೀಗ ಸುತ್ತೂರು ಮಠ ಮತ್ತು ಕರ್ನಾಟಕ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಜಂಟಿಯಾಗಿ ಬಾಸ್ಕೆಟ್ ಬಾಲ್ ಅಕಾಡೆಮಿಯನ್ನು ಪ್ರಾರಂಭಿಸುತ್ತಿರುವುದು ಸುತ್ತೂರು ಮಠದ ಹೆಗ್ಗಳಿಕೆಗೆ ಮತ್ತೊಂದು ಸಾಕ್ಷಿ. ಇಂತಹ ಒಳ್ಳೆಯ ಕೆಲಸಗಳಿಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡಲು ನಮ್ಮ ಸರ್ಕಾರ ಸದಾ ಸಿದ್ಧ ಎಂದರು.
ನಾವು ಮನುಷ್ಯರು, ಮನುಷ್ಯ ಮನುಷ್ಯರ ನಡುವೆ ದ್ವೇಷ ಭಾವನೆ ಸರಿಯಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾತಿಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜ ಇರಬೇಕು ಎಂದು ಕುವೆಂಪು ಹೇಳಿದ್ದಾರೆ. ಕುವೆಂಪು ಅವರ ನುಡಿ ಸಾಕಾರ ಆಗಬೇಕಾದರೆ ಎಲ್ಲರೂ ಮನುಷ್ಯರಾಗಬೇಕು. ಎಲ್ಲರೂ ಹುಟ್ಟುವಾಗ ವಿಶ್ವಮಾನವರು, ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ.
ಜ್ಞಾನ ವಿಕಾಸ ಆಗಬೇಕು, ಜ್ಞಾನ ಯಾರ ಸ್ವತ್ತಲ್ಲ. ಜ್ಞಾನ ಒಬ್ಬರ ಸ್ವತ್ತಾಗಿದ್ದರೆ ಅಂಬೇಡ್ಕರ್ ಸಂವಿಧಾನ ರಚಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಹೇಳಿದರು.
ಸುತ್ತೂರು ಮಠ ಇಡೀ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದೆ - ಸಚಿವ ಪರಮೇಶ್ವರ್: ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ಶ್ರೀ ಸುತ್ತೂರು ಮಠ ಸಮಾಜದ ಧಾರ್ಮಿಕ ಕ್ಷೇತ್ರದಲ್ಲಿ ಅದರಲ್ಲೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇಡೀ ದೇಶವೇ ಮಾದರಿಯಾಗುವ ಕೆಲಸ ಮಾಡುತ್ತಿದೆ. 200ಕ್ಕೂ ಹೆಚ್ಚು ಸಂಸ್ಥೆಗಳನ್ನ ರಾಜ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆಯುವ ಮೂಲಕ ಲಕ್ಷಾಂತರ ಯುವಕರು ಜೀವನ ಕಟ್ಟಿಕೊಳ್ಳಲು ನೇರವಾಗಿದೆ ಎಂದರು.
ದೇಸಿಯ ಆಟಗಳು ನಮ್ಮ ಸಂಸ್ಕೃತಿಗೆ ಹೊಂದಿಕೆ ಇರುವಂತದು. ನಮ್ಮ ಪೂರ್ವಜ್ಜರು ತಾಂತ್ರಿಕವಾಗಿ ಆಟಗಳನ್ನು ನಮಗೆ ನೀಡಿದ್ದಾರೆ. ಈ ಆಟಗಳನ್ನ ಆಯೋಜನೆ ಮಾಡುವ ಮೂಲಕ ಹಿಂದಿನ ಇತಿಹಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ದೇಸಿಯ ಆಟಗಳು ಉಳಿಯಬೇಕು, ಹಿರಿಯರು ಬಿಟ್ಟು ಹೋದ ಆದರ್ಶಗಳನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್.ಸಿ. ಮಹದೇವಪ್ಪ ಮಾತನಾಡಿ, ಸುತ್ತೂರು ಮಠದಿಂದ ಎಂದಿನಂತೆ ಎಲ್ಲಾ ಜನರು ಮತ್ತು ಜನಾಂಗದವರನ್ನು ಸೇರಿಸುವ ಕೆಲಸ ಮುಂದುವರೆದಿದೆ. ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಮಾದರಿಯಾಗಿದೆ. ಎಲ್ಲಾ ಜನರಲ್ಲೂ ಮೊದಲು ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಯಬೇಕು. ಜಾತಿಯತೆಯನ್ನು ಹೋಗಲಾಡಿಸಲು ಮುಂದಾಗಬೇಕು. ಆದರ್ಶ ವ್ಯಕ್ತಿಗಳ ತತ್ವವನ್ನು ಅಳವಡಿಸಿಕೊಂಡು ಅದರಂತೆ ನಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಜನತಾದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ : ನೋಡಲ್ ಅಧಿಕಾರಿಗಳ ನಿಯೋಜನೆ, ಪ್ರತ್ಯೇಕ ಕೌಂಟರ್ ವ್ಯವಸ್ಥೆ