ಬೆಂಗಳೂರು: ಗೆಳೆಯರ ಸಹವಾಸದಿಂದಾಗಿ ಸಿಗರೇಟ್ ಚಟ ಕಲಿತು ಬಳಿಕ ಅದರಿಂದ ಹೊರಬಂದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಇದೇ ವೇಳೆ ಅವರು ಆರೋಗ್ಯಯುತ ಜೀವನಶೈಲಿಗೆ ಒತ್ತು ನೀಡಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ.
ವಿಧಾನಸೌಧದ ಸೆಕ್ರೆಟರಿಯೆಟ್ ಬ್ಯಾಂಕ್ವೆಟ್ ಹಾಲ್ನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಹವಾಸ ದೋಷಗಳಿಂದ ಈ ರೀತಿಯ ದುಶ್ಚಟಗಳಿಗೆ ಬಲಿಯಾಗಬಹುದು. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದು, ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಈ ಮುಂಚೆ ನಾನು ಕೂಡ ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ನನ್ನ ಸ್ನೇಹಿತ ವಿದೇಶದಿಂದ ಸಿಗರೇಟ್ ಪ್ಯಾಕ್ ತಂದುಕೊಟ್ಟಿದ್ದರು. ಕಡಿಮೆ ಅವಧಿಯಲ್ಲಿಯೇ ನಾನು ಧೂಮಪಾನ ಮಾಡಿದ್ದೆ. ಮರುದಿನ ನನಗೆ ಬೇಸರವಾಗಿತ್ತು. 1987ರ ಆಗಸ್ಟ್ 27ರಂದು ಸಿಗರೇಟ್ ಸೇವನೆ ಬಿಡುವ ನಿರ್ಧಾರ ಮಾಡಿದ್ದೆ. ಅಂದಿನಿಂದ ಧೂಮಪಾನದಿಂದ ದೂರವಾಗುವ ದೃಢ ನಿರ್ಧಾರ ತೆಗೆದುಕೊಂಡೆ ಎಂದು ಸಿಎಂ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ದೈಹಿಕ ಚಟುವಟಿಕೆ ಇಲ್ಲದೇ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಜನರಲ್ಲಿ ಅನಾರೋಗ್ಯದ ಅಪಾಯ ಹೆಚ್ಚು. ಆರೋಗ್ಯಯುತ ಜೀವನಶೈಲಿಗೆ ದೈಹಿಕ ಮತ್ತು ಮಾನಸಿಕ ಕ್ರಿಯಾಶೀಲತೆ ಅಗತ್ಯವಾಗಿದೆ. ಜೀವನಶೈಲಿ ಮತ್ತು ಆಹಾರ ಅಭ್ಯಾಸಗಳು ಮಾನವ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದರು.
ಇದೇ ವೇಳೆ ಅವರು ರಾಜ್ಯ ಸರ್ಕಾರ, ಎಲ್ಲಾ ವರ್ಗದ ಜನರಿಗೆ ಅಗತ್ಯ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನಿರಂತರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಜಾರಿಗೆ ತಂದಿದೆ. ಇಂದು ಮಾರಣಾಂತಿಕ ಕ್ಯಾನ್ಸರ್ ಅನ್ನು ಕೂಡ ಗುಣಪಡಿಸಬಹುದಾಗಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಲ್ಲಿ ದೀರ್ಘಕಾಲದವರೆಗೆ ಆರೋಗ್ಯ ನಿರ್ವಹಣೆ ಮಾಡಲು ಸಾಧ್ಯ. ಆರಂಭಿಕ ಹಂತದಲ್ಲೇ ಉತ್ತಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ವೃದ್ಧಾಪ್ಯದಲ್ಲಿನ ಸಮಸ್ಯೆ ತಪ್ಪಿಸಬಹುದು ಎಂದು ಸಿಎಂ ಸಲಹೆ ನೀಡಿದರು.
ಉತ್ತಮ ಜೀವನಶೈಲಿ ಮತ್ತು ಕಠಿಣ ಶ್ರಮದ ಕೆಲಸಗಳು ನಮ್ಮ ಪೂರ್ವಿಕರನ್ನು ಆರೋಗ್ಯಯುತ ಮತ್ತು ಶಕ್ತಿಶಾಲಿಯಾಗಿರಿಸಿದ್ದವು. ಈ ರೀತಿಯ ಆರೋಗ್ಯ ತಪಾಸಣೆ ಶಿಬಿರಗಳನ್ನು ರಾಜ್ಯದೆಲ್ಲೆಡೆ ನಿಯಮಿತವಾಗಿ ಆಯೋಜಿಸಬೇಕು ಎಂದು ನಾನು ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದರು. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ತಂಬಾಕು ಸೇವನೆ ತ್ಯಜಿಸಿದ ಶೇ 46ರಷ್ಟು ಯುವಜನತೆ: ವರದಿ - Quit Tobacco