ಮೈಸೂರು: ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿಶೇಷ ವಿಮಾನದಲ್ಲಿ ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಬರಮಾಡಿಕೊಂಡರು.
ರಾಹುಲ್ ಗಾಂಧಿ ಅವರಿಂದ ತೆರವಾಗಿರುವ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಕ್ಟೋಬರ್ 23ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಂತರ ರಸ್ತೆಯ ಮೂಲಕ ಗುಂಡ್ಲುಪೇಟೆ ಮಾರ್ಗವಾಗಿ ವಯನಾಡ್‌ಗೆ ತೆರಳಿದರು.
ಈ ವೇಳೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ರವಿಶಂಕರ್, ದರ್ಶನ್ ದ್ರುವನಾರಾಯಣ್, ಎ.ಆರ್.ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಇದ್ದರು.
ಬುಧವಾರ ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗು ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು- ಡಿ.ಕೆ.ಶಿವಕುಮಾರ್: ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಬಗ್ಗೆ ಸುರ್ಜೇವಾಲ ಹಾಗೂ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಟಿಕೆಟ್ ಘೋಷಣೆಗೆ ಸಮಯವಿದೆ, ಬಿಜೆಪಿ ಲೆಕ್ಕಾಚಾರದಂತೆ ನಾವೂ ಲೆಕ್ಕಾಚಾರ ಹಾಕಬೇಕು. ಈಗ ಅಂತಿಮ ಹಂತದ ಚರ್ಚೆ, ಲೆಕ್ಕಾಚಾರಗಳು ಬಾಕಿ ಇವೆ. ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಮಾತನಾಡಿ ಟಿಕೆಟ್ ಕ್ಲಿಯರ್ ಮಾಡುತ್ತೇವೆ. ಟಿಕೆಟ್ ಘೋಷಣೆಯಾದ ನಂತರ ಬಿ ಫಾರಂಗೆ ನಾನೇ ಸಹಿ ಮಾಡುವುದು. ಅದು ಎರಡು ನಿಮಿಷದ ಕೆಲಸ. ನಾವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ನಮ್ಮನ್ನು ಯೋಗೇಶ್ವರ್ ಯಾವುದೇ ರೀತಿಯಲ್ಲಿ ಸಂಪರ್ಕಿಸಿಲ್ಲ. ನಾಳೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು" ಎಂದು ಹೇಳಿದರು.
ಇದನ್ನೂ ಓದಿ: ವಯನಾಡ್ ಉಪ ಚುನಾವಣೆ: ಪ್ರಿಯಾಂಕಾ ಗಾಂಧಿ ಎದುರು ಬಿಜೆಪಿ ಯುವ ನಾಯಕಿ ನವ್ಯಾ ಹರಿದಾಸ್ ಕಣಕ್ಕೆ