ಮೈಸೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಎಡಿಜಿಪಿ 'ಹಂದಿ' ಎಂದು ಬರೆದಿದ್ದಾರಾ?. ಅವರು ಎಡಿಜಿಪಿ ಇಂಗ್ಲಿಷ್ನ ಬರ್ನಾರ್ಡ್ ಷಾ ಅವರ ವಾಕ್ಯವನ್ನು ಉಲ್ಲೇಖಿಸಿದ್ದಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಇದಕ್ಕೆ ನಾನು ಕಾಮೆಂಟ್ ಮಾಡುವುದಿಲ್ಲ. ಕುಮಾರಸ್ವಾಮಿ ಅವರು ಎಡಿಜಿಪಿ ಅವರ ಮೇಲೆ ಆರೋಪ ಮಾಡಿದ್ದರು. ಅದಕ್ಕೆ ಎಡಿಜಿಪಿ ಉತ್ತರಿಸಿದ್ದಾರೆ" ಎಂದರು.
ಹಂದಿ ಎಂಬ ಪದ ಬಳಕೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗೆ, "ಈ ಕುರಿತಾಗಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸುದೀರ್ಘ ವಿವರಣೆಯನ್ನೂ ನೀಡುವುದಿಲ್ಲ. ಅದರಲ್ಲೂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಲಾರೆ ಎಂದು ನಿನ್ನೆಯೇ ಹೇಳಿದ್ದೇನೆ" ಎಂದು ತಿಳಿಸಿದರು.
ಅನುಮಾನಾಸ್ಪದ ರೇವ್ ಪಾರ್ಟಿ ಪ್ರಕರಣ ವಿಚಾರ: ಮೈಸೂರಿನ ಹೊರವಲಯದಲ್ಲಿ ನಡೆದಿರುವ ಅನುಮಾನಾಸ್ಪದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, "ಪೊಲೀಸರು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಎಸ್ಪಿ ನನಗೆ ಮಾಹಿತಿ ನೀಡಿದ್ದಾರೆ" ಎಂದರು.
ದಸರಾ ಸಿದ್ಧತಾ ಕಾರ್ಯಗಳ ವೀಕ್ಷಣೆ: ದಸರಾ ಉತ್ಸವದ ಸಿದ್ಧತೆಗಳ ಕುರಿತು ಮಾತನಾಡುತ್ತಾ, "ದಸರಾ ಉತ್ಸವಗಳ ಸಿದ್ಧತೆಗಳಿಗಾಗಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಕ್ಟೋಬರ್ 2ರಂದು ಮೈಸೂರಿಗೆ ಸಿದ್ಧತೆಗಳನ್ನು ವೀಕ್ಷಿಸಲು ಆಗಮಿಸಲಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರು ಹೊರವಲಯದಲ್ಲಿ ರೇವ್ ಪಾರ್ಟಿ?; ತಡರಾತ್ರಿ ಪೊಲೀಸರ ದಾಳಿ, ಯುವಕ-ಯುವತಿಯರು ವಶಕ್ಕೆ - Mysuru Police Raid