ಕೋಲಾರ: ಹಾಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಒಂದೇ ವೇದಿಕೆಯಲ್ಲಿ ಜನರ ಮುಂದೆ ಪೈಪೋಟಿ ಮೇಲೆ ಸುಳ್ಳು ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬಂಗಾರಪೇಟೆಯಲ್ಲಿ ಭಾನುವಾರ ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ವಿ. ಗೌತಮ್ ಪರ ರೋಡ್ ಶೋನಲ್ಲಿ ಮತಯಾಚಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ಏನು ಕೊಡಲಿಲ್ಲ, ಬರೀ ಖಾಲಿ ಚೂಂಬು ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಬಡವರ, ರೈತರ, ದಲಿತರ, ಮಹಿಳೆಯರ ಹಾಗೂ ಹಿಂದುಳಿದವರ, ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಪರಿಹಾರ ಕೊಡಿಲಿಲ್ಲ. ಅದಕ್ಕೋಸ್ಕರ ನರೇಂದ್ರ ಮೋದಿಯವರು ಕರ್ನಾಟಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಖಾಲಿ ಚೂಂಬನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದ್ದೇವೆ. ದೇವೇಗೌಡರು ಮನಮೋಹನ್ ಸಿಂಗ್ ಖಾಲಿ ಚೂಂಬು ಕೊಟ್ಟಿ ಹೋಗಿದ್ದರೆ, ಈಗ ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ಅದನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ನಾನು ನರೇಂದ್ರ ಮೋದಿ ಹಾಗೂ ದೇವೇಗೌಡರನ್ನು ಕೇಳುತ್ತೇನೆ.. 2013 -14 ರಲ್ಲಿ ದೇಶದ ಮೇಲಿನ ಸಾಲ 53 ಲಕ್ಷದ 11 ಸಾವಿರ ಕೋಟಿ ರೂ. ಈಗ ದೇಶದ ಸಾಲ 187 ಲಕ್ಷ ಕೋಟಿ ರೂಪಾಯಿ ಇದನ್ನು ಅಕ್ಷಯ ಪಾತ್ರೆ ಎಂದು ಕರೆಯಬೇಕಾ ಅಥವಾ ಖಾಲಿ ಚೂಂಬು ಎಂದು ಕರೆಯಬೇಕಾ ಎಂದು ಪ್ರಶ್ನಿಸಿದರು.
ದೇವೇಗೌಡರೇ ನೀವು ಮಾಜಿ ಪ್ರಧಾನಿಯಾಗಿದ್ದವರು, ಇಷ್ಟೊಂದು ಸುಳ್ಳು ಹೇಳಿ ನರೇಂದ್ರ ಮೋದಿಯವರನ್ನು ಹೊಗಳಬಾರದಿತ್ತು. ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ಈ ದೇಶದ ಮೇಲೆ 124 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಸಾಮಾನ್ಯ ಜನರು 45% ತೆರಿಗೆ ಕಟ್ಟುತ್ತಿದ್ದರು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಬಡವರು, ಸಾಮಾನ್ಯ ಜನರು ತೆರಿಗೆ ಕಟ್ಟುವುದು ಹೆಚ್ಚಾಗಿದೆ. ಶ್ರೀಮಂತರು ತೆರಿಗೆ ಕಟ್ಟುವುದು ಕಡಿಮೆಯಾಗಿದೆ. ಇದನ್ನು ಮೋದಿಯವರು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರೈತರ ಸಾಲ ಒಂದು ರೂಪಾಯಿ ಮನ್ನಾ ಮಾಡಲಿಲ್ಲ. ಮಾಡಿದ್ದಾರಾ ಯಾವಾಗದರೂ?. 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದವರು ಮನಮೋಹನ್ ಸಿಂಗ್ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 27 ಲಕ್ಷ ರೈತರ 6 ಸಾವಿರದ 185 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯಗೆ 250 ಕೆ.ಜಿ ತೂಕದ ಬೃಹತ್ ಗಾತ್ರದ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕಲಾಯಿತು.
ಇದನ್ನೂ ಓದಿ: 5 ಕೋಟಿ ಹಣ ಸಾಗಣೆ ಪ್ರಕರಣ; ಬಿಜೆಪಿ ಮನಿ ಲಾಂಡರಿಂಗ್ ಮಾಡುತ್ತಿದೆ: ರಣದೀಪ್ ಸುರ್ಜೇವಾಲಾ - Lok Sabha Election 2024