ಬೆಂಗಳೂರು: ಬಿಜೆಪಿಯವರು ಸರ್ವಾಧಿಕಾರ ಧೋರಣೆಯ ಮೇಲೆ ನಂಬಿಕೆ ಇರಿಸಿದ್ದು, ಸಂವಿಧಾನ ಬದಲಾವಣೆ ಮಾಡುವ ಒಳಸಂಚು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಹಕರ ವ್ಯವಹಾರಗಳು ಹಾಗೂ ಮಾಪನಶಾಸ್ತ್ರ ಇಲಾಖೆಯಿಂದ ಆಯೋಜಿಸಿದ್ದ ಆಹಾರಸೌಧ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ನೆರವೇರಿಸಿ, ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಮುಂಚೆ ಕೇಂದ್ರ ಸಚಿವರಾಗಿದ್ದಾಗಲೂ ಈ ಮಾತನ್ನು ಹೇಳಿದ್ದರು. ಇದು ಬಿಜೆಪಿಯ ಒಳಸಂಚಾಗಿದೆ ಎಂದರು.
ಸಂವಿಧಾನದ ಬಗ್ಗೆ ಅನಗತ್ಯವಾಗಿ ಮಾತಾನಾಡಿದ್ದಾರೆ. ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆ ತರಬೇಕಾದರೆ ಕೇಂದ್ರ, ರಾಜ್ಯ ಸರ್ಕಾರಗಳ ಸದನಗಳಲ್ಲಿ ಮೂರನೇ 2ರಷ್ಟು ಬಹುಮತ ಇರಬೇಕು. ಬಿಜೆಪಿಯವರಿಗೆ ದೇಶ ಹಾಗೂ ಬಡವರ ಏಳಿಗೆಗೆ ಬಹುಮತ ಬೇಕಾಗಿಲ್ಲ, ಬದಲಾಗಿ ಸಂವಿಧಾನ ಬದಲಾಯಿಸಲು ಬಹುಮತ ಬೇಕಾಗಿದೆ. ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಎಂಬುದು ಬಿಜೆಪಿಯ ಒಳಸಂಚು. ಆದ್ದರಿಂದ ಇಡೀ ದೇಶದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಯ ಈ ಯೋಚನೆಯನ್ನು ವಿರೋಧಿಸಬೇಕು. ಒಂದು ವೇಳೆ, ಸಂವಿಧಾನ ಬದಲಾವಣೆ ಮಾಡಿದರೆ, ಈ ದೇಶದಲ್ಲಿ ರಕ್ತಪಾತವಾಗುತ್ತದೆ. ಆದ್ದರಿಂದ ನರೇಂದ್ರ ಮೋದಿಯವರು ತಮ್ಮ ಈ ಯೋಚನೆಯನ್ನು ಅನಂತಕುಮಾರ ಮೂಲಕ ಹೇಳಿಸುತ್ತಿದ್ದಾರೆ ಎಂದು ದೂರಿದರು.
ಅನಂತಕುಮಾರ್ ಹೇಳಿಕೆ ವೈಯಕ್ತಿಕ ಎಂದು ಬಿಜೆಪಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮಂತ್ರಿಮಂಡಲದಲ್ಲಿದ್ದಂತಹವರು ಹಾಗೂ ಹಾಲಿ ಸಂಸದರಾಗಿರುವ ಹಿರಿಯ ನಾಯಕರದ ಅನಂತಕುಮಾರ್ ಅವರ ಹೇಳಿಕೆ ವೈಯಕ್ತಿಕವಾಗುತ್ತದೆಯೇ? ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದೇ ಮನುಸ್ಮೃತಿಯ ತತ್ವಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ. ಆದರೆ, ನಮ್ಮ ಸಂವಿಧಾನ ಸಮಸಮಾಜ ನಿರ್ಮಾಣದ ತತ್ವವನ್ನು ಹೊಂದಿದ್ದು, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂದು ಸ್ಕ್ರೀನಿಂಗ್ ಸಮಿತಿಯ ಸಭೆ ನಡೆಯುತ್ತಿದ್ದು, ಶಿಫಾರಸುಗಳನ್ನು ಮಾಡಲಾಗುವುದು. ಇದರ ಬಗ್ಗೆ ತೀರ್ಮಾನ ರಾಷ್ಟ್ರೀಯ ಚುನಾವಣಾ ಸಮಿತಿಯು ಕೈಗೊಳ್ಳುತ್ತದೆ ಎಂದರು.
ಆಹಾರ ಇಲಾಖೆ ಸ್ವಂತ ಕಟ್ಟಡ ನಿರ್ಮಿಸಿ, ಒಂದೇ ಸೂರಿನಡಿ ಇಲಾಖೆಯ ಎಲ್ಲ ಕಾರ್ಯಚಟುವಟಿಕೆಗಳು ನಡೆಸುವಂತೆ ಅನುಕೂಲವಾಗಲು ಆಹಾರಸೌಧದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆಹಾರ ಇಲಾಖೆಯಿಂದಲೇ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಸರ್ಕಾರ ಪ್ರಮುಖ ಇಲಾಖೆಗಳಲ್ಲೊಂದಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಸಂವಿಧಾನ ಬದಲಿಸುವ ಅನಂತ್ ಕುಮಾರ್ ಹೇಳಿಕೆಗೆ ಸ್ವ- ಪಕ್ಷದವರಿಂದಲೇ ಖಂಡನೆ