ಬೆಂಗಳೂರು: ಬೆಂಗಳೂರು ಬಿಸಿನೆಸ್ ಕಾರಿಡಾರ್ ರೂಪಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 73 ಕಿ.ಮೀ ಉದ್ದದ ರಸ್ತೆಯನ್ನು 27 ಸಾವಿರ ಕೋಟಿ ಅನುದಾನದಲ್ಲಿ ನಿರ್ಮಿಸಲಾಗುವುದು. ಈ ಕುರಿತು ಪಿಪಿಪಿ ಮಾದರಿಯಲ್ಲಿ ಆರ್‌ಎಫ್‌ಪಿ ಕರೆಯಲಾಗುವುದು. ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
15ನೇ 2024-25ನೇ ಸಾಲಿನ ಕರ್ನಾಟಕ ಬಜೆಟ್ ಭಾಷಣ ಮಾಡಿದ ಅವರು, ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುವುದು. ನಗರಾಭಿವೃದ್ಧಿ ಅಂಗಸಂಸ್ಥೆ ಬಿಬಿಎಂಪಿ, , ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಆರ್‌ಸಿಎಲ್, ಬಿಡಿಎನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಸೇವೆಯೊಂದಿಗೆ ಮೆಟ್ರೋ ರೈಲು ಹಾಗೂ ಸಬ್-ಅರ್ಬನ್ ರೈಲು ಯೋಜನೆಗಳು ಸೇರಿ ಬಹುವಿಧ ಸಾರಿಗೆ ವ್ಯವಸ್ಥೆಗಳ ಒಗ್ಗೂಡಿಸುವಿಕೆ ವಿಶೇಷ ಒತ್ತು ನೀಡಲಾಗಿದೆ.
2025ರೊಳಗೆ 44 ಕಿಮೀ ಮೆಟ್ರೋ ಮಾರ್ಗ ಸೇರ್ಪಡೆಗೆ ಆದ್ಯತೆ ನೀಡಲಾಗುವುದು. 15,611 ಕೋಟಿ ವೆಚ್ಚದಲ್ಲಿ ಅನುಮೋದನೆ ಕೊಡಲಾಗಿದೆ. ಸರ್ಕಾಪುರ ಅಗ್ರಹಾರ ಕೋರ ಮಂಗಳ ಡೈರಿ ವೃತ್ತ, ಮೇಕ್ರಿ ವೃತ್ತ, ಹೆಬ್ಬಾಳ ಸಂಪರ್ಕಿಸುವ ಮಾರ್ಗ ಸೇರಿವೆ. ಬೆಂಗಳೂರು ಉಪ ರೈಲು ಯೋಜನೆಯಡಿ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣವರ, ಹೀಲಲಿಗೆಯಿಂದ ರಾಜಾನಕುಂಟೆ ವರೆಗೆ 42.2 ಕಿಲೋ ಮೀಟರ್ ಮಾರ್ಗ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ಹಂತ-5 ಕಾರ್ಯಾರಂಭಕ್ಕೆ ತೀರ್ಮಾನ: 2024ರ ಮೇ ತಿಂಗಳಿನಲ್ಲಿ ಕಾವೇರಿ ಹಂತ- 5 ಕಾರ್ಯಾರಂಭಕ್ಕೆ ನಿರ್ಧರಿಸಲಾಗಿದೆ. 5,550 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಯೋಜನೆ ರೂಪಿಸಲಾಗಿದೆ. ಪ್ರತಿ ದಿನ 12 ಲಕ್ಷ ಜನರಿಗೆ 110 ಲಕ್ಷ ಲೀಟರ್ ಕುಡಿಯುವ ನೀರು ಪೂರೈಕೆ ಮಾಡಲು ಚಿಂತಿಸಲಾಗಿದೆ. ಕಾವೇರಿ ಹಂತ- 5 ಅಡಿ ಡಿಸೆಂಬರ್ 2024ರಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ 228 ಕಿಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
13 ಎಸ್.ಟಿ.ಪಿ ಘಟಕಗಳಿಂದ 100 ಎಂ.ಎಲ್.ಡಿ ರಷ್ಟು ಒಳಚರಂಡಿ ನೀರನ್ನು ಸಂಸ್ಕರಿಸಲಾಗುವುದು. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್.ಟಿ.ಪಿ) 441 ಕೋಟಿ ರೂ.ಗಳ ಮೊತ್ತದಲ್ಲಿ ಉನ್ನತೀಕರಣ ಮಾಡಲಾಗುತ್ತದೆ. ಈ ಮೂಲಕ 268 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಪ್ರತಿನಿತ್ಯ ಸಂಸ್ಕರಿಸಿ ಮರುಬಳಕೆ ಆದ್ಯತೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಲಾಗುವುದು. 200 ಕೋಟಿ ರೂ.ಗಳ ಮೊತ್ತದಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರು ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಘಟಕ ನಿರ್ಮಾಣಕ್ಕೆ ಒತ್ತು: ಬೆಂಗಳೂರು ನಗರ - ಜಿಲ್ಲೆಯನ್ನು ನಾಲ್ಕು ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ. ನಗರದ ಹೊರವಲಯದ ನಾಲ್ಕು ಕಡೆಗಳಲ್ಲಿ 50 ರಿಂದ 100 ಎಕರೆ ಜಮೀನಿನಲ್ಲಿ ತ್ಯಾಜ್ಯ ಸಂಸ್ಕರಣೆ ಒತ್ತು ನೀಡಲಾಗಿದೆ. 30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಘಟಕ ನಿರ್ಮಾಣ ಮಾಡಲಾಗುವುದು.
ಬಿಬಿಎಂಪಿಯ ಅರಣ್ಯ, ಕೆರೆ ಮತ್ತು ತೋಟಗಾರಿಕಾ ವಿಭಾಗವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ವಹಣಾ ವಿಭಾಗ ಎಂದು ಮರುನಾಮಕರಣ ಮಾಡಲಾಗಿದೆ. ನಗರದಲ್ಲಿ ವಾತಾವರಣದ ಸ್ವಚ್ಛತೆಗಾಗಿ ಮರಗಳ ಗಣತಿ ನಡೆಯಲಿದೆ. ಕೆರೆ ಮತ್ತು ಉದ್ಯಾನವನಗಳ ತಂತ್ರಾಂಶ ಆಧಾರಿತ ಮೇಲ್ವಿಚಾರಣೆ ಮಾಡಲಾಗುವುದು. ಕೆರೆ ಮತ್ತು ಉದ್ಯಾನಗಳ ಅಭಿವೃದ್ಧಿಗಾಗಿ ಬಿಬಿಎಂಪಿ ಸಹಯೋಗದೊಂದಿಗೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ವಜ್ಞ ಉದ್ಯಾನನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಆಸ್ತಿ ತೆರಿಗೆ ಡಿಜಿಟಲೀಕರಣಕ್ಕೆ ಆದ್ಯತೆ: ಬೆಂಗಳೂರಿನಲ್ಲಿ 2024-25ಕ್ಕೆ 6 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆಯಿದೆ. ಬಿಬಿಎಂಪಿ ವ್ಯಾಪ್ತಿಯ 20 ಲಕ್ಷ ಆಸ್ತಿ ತೆರಿಗೆ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ನಗರದ ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಮುಂದುವರಿಕೆ ಮಾಡಲಾಗಿದೆ. 147 ಕಿ.ಮೀ ಉದ್ದದ ರಸ್ತೆ 1700 ಕೋಟಿ ವೆಚ್ಚದಲ್ಲಿ ವೈಟ್ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುವುದು. ಹೆಬ್ಬಾಳ ಜಂಕ್ಷನ್ನಲ್ಲಿ ಪ್ರಾಯೋಗಿಕವಾಗಿ ಟನೆಲ್ ನಿರ್ಮಿಸಲು ನಿರ್ಧರಿಸಲಾಗಿದೆ. ಸುಗಮ ಸಂಚಾರ ಯೋಜನೆಗೆ ಅಂತಾರಾಷ್ಟ್ರೀಯ ಮಟ್ಟದ ತಜ್ಞ ಸಂಸ್ಥೆ ನೇಮಕ ಮಾಡಲಾಗುವುದು. 73 ಕಿಮೀ ಉದ್ದದ ರಸ್ತೆಯನ್ನು 27 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ಮಾಡಲಾಗುವುದು.
1334 ಹೊಸ ಎಲೆಕ್ಟ್ರಿಕ್ ಬಸ್, 820 ಡೀಸೆಲ್ ಬಸ್: 1334 ಹೊಸ ಎಲೆಕ್ಟ್ರಿಕ್ ಬಸ್ಗಳು, 820 ಡೀಸೆಲ್ ಬಸ್ಗಳನ್ನು ಸೇರ್ಪಡೆ ಮಾಡಲಾಗುವುದು. ಟ್ರಾಫಿಕ್ ಸಿಗ್ನಲ್ ನಿರ್ವಣೆಗೆ ಜಪಾನ್ ತಂತ್ರಜ್ಞಾನದ ನೆರವು ನೀಡಲಾಗುವುದು. ಪ್ರಮುಖ 28 ಜಂಕ್ಷನ್ಗಳಲ್ಲಿ ನೂತನ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲಾಗುವುದು. ಬೆಂಗಳೂರು ಜಲಮಂಡಳಿಗೆ 5,550 ಕೋಟಿ ಅನುದಾನ ಒದಗಿಸಲಾಗುವುದು. ಬೆಂಗಳೂರು ನಗರ ವಿಶ್ವದರ್ಜೆಗೇರಿಸಲು ಬ್ರ್ಯಾಂಡ್ ಬೆಂಗಳೂರು ಯೋಜನೆ ಒತ್ತು ನೀಡಲಾಗುವುದು.
ರಾತ್ರಿ ವ್ಯಾಪಾರ ವಹಿವಾಟು ಮೇಲಿನ ನಿರ್ಬಂಧದ ಸಮಯ ವಿಸ್ತರಣೆ: ರಾತ್ರಿ ವ್ಯಾಪಾರ ವಹಿವಾಟು ಮೇಲಿನ ನಿರ್ಬಂಧದ ಸಮಯ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ 10 ಮಹಾನಗರದಲ್ಲಿ ರಾತ್ರಿ 1 ಗಂಟೆವರೆಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಹೋಟೆಲ್, ಅಂಗಡಿಗಳು ರಾತ್ರಿ 1 ಗಂಟೆವರೆಗೆ ತೆರೆಯಲು ಒಪ್ಪಿಗೆ ಕೊಡಲಾಗಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ: ನೇರ ಪ್ರಸಾರ