ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ತವರಿನ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ರಣವ್ಯೂಹವನ್ನು ಹೆಣೆಯುತ್ತಿದ್ದು, ಬಿಜೆಪಿ ಮುಖಂಡರಿಗೆ ಗಾಳ ಹಾಕುತ್ತಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದೆ. ಜೊತೆಗೆ ಮೈಸೂರು ತವರು ಜಿಲ್ಲೆ ಆಗಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ಈ ಎರಡು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಗೆಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕೈ ಹಿಡಿಯುವರಾ ಪ್ರಸಾದ್ ಬೆಂಬಲಿಗರು?: ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಸೋದರಳಿಯ ಹಾಗೂ ಸಹೋದರ ಈಗಾಗಲೇ ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಈಗ ಸಂಸದರ ಬೆಂಬಲಿಗರು ಕಮಲ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಆಗಲು ಮುಂದಾಗಿದ್ದಾರೆ. ಏ.3 ರಂದು ಸಿದ್ದರಾಮಯ್ಯ ಸಮ್ಮುಖದಲ್ಲಿ ಸಂಸದರ ಬೆಂಬಲಿಗರು ಹಾಗೂ ದಲಿತ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವುದು ಪಕ್ಷದ ವಿವಿಧ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಆಪರೇಷನ್ ಹಸ್ತ ಸಕ್ಸಸ್ ಆಗಿದೆ ಎನ್ನಲಾಗ್ತಿದೆ.
ಇನ್ನು, 3 ದಿನ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದು ಈ ವೇಳೆ, ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಬೆಂಬಲ ಕೇಳುವ ಸಾಧ್ಯತೆ ಇದೆ. ಚುನಾವಣೆ ಹೊತ್ತಲ್ಲಿ ಎದುರಾಳಿಗಳು ಭೇಟಿಯಾದರೆ ಚುನಾವಣಾ ಆಖಾಡ ಮತ್ತಷ್ಟು ರಂಗೇರಲಿದೆ.
ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದು ನಿಜ : ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಡಾ ಮೋಹನ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಕೆಲ ತೀರ್ಮಾನಗಳಿಂದ ಬೇಸರ ಆಗಿರುವುದು ನಿಜ. ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿರುವುದು ಕೂಡ ನಿಜ. ಎರಡು ದಿನಗಳಲ್ಲಿ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಪ್ರಸಾದ್ ಅವರನ್ನು ಭೇಟಿಯಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಬೆಂಬಲಿಗರು ಕಾಂಗ್ರೆಸ್ ನತ್ತ ಮುಖ ಮಾಡುತ್ತಿರುವುದು ರಾಜಕೀಯ ವಲಯದ ಪ್ರಮುಖ ಬೆಳವಣಿಗೆಯಾಗಿದೆ.
ಇದನ್ನೂಓದಿ:ಸಂಗಣ್ಣ ಕರಡಿ ಸಿಟ್ಟು ಶಮನ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಸಜ್ಜು - MP Sanganna Karadi