ಕೊಪ್ಪಳ: ತಾಲೂಕಿನ ಮುನಿರಾಬಾದ್ನಲ್ಲಿರುವ ಕಲ್ಯಾಣ-ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾನುವಾರ ಬಾಗಿನ ಅರ್ಪಣೆ ಮಾಡಿದರು.
ರೈತರ ಮೊಗದಲ್ಲಿ ಸಂತಸ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಆಗಸ್ಟ್ ತಿಂಗಳಲ್ಲಿ ಕಿತ್ತು ಹೋಗಿ ತುಂಬಿದ್ದ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿತ್ತು. ಇದರಿಂದಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ಸಮರ್ಪಕ ನೀರು ಸಿಗುವುದಿಲ್ಲ ಎಂಬ ಆತಂಕ ಮನೆಮಾಡಿತ್ತು. ಆದರೆ, ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಮತ್ತೆ ಜಲಾಶಯ ತುಂಬಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಟಿಬಿ ಡ್ಯಾಂಗೆ ಮೊದಲ ಬಾರಿ ಬಾಗಿನ ಅರ್ಪಿಸಿದ ಸಿಎಂ: ತುಂಗಭದ್ರಾ ಜಲಾಶಯದ 70 ವರ್ಷಗಳ ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಬಾಗಿನ ಅರ್ಪಿಸಿದರು. ಈ ಮೊದಲು ಬಾಗಿನ ಅರ್ಪಿಸಲು ದಿನಾಂಕ ನಿಗದಿ ಮಾಡಲಾಗಿತ್ತಾದರೂ ಕ್ರಸ್ಟ್ ಗೇಟ್ ಅವಘಡದಿಂದಾಗಿ ಮಾಡಲಾಗಿರಲಿಲ್ಲ. ಅಂದು ಜಲಾಶಯಕ್ಕೆ ಭೇಟಿ ನೀಡಿದ್ದ ಸಿಎಂ ಗೇಟ್ ದುರಸ್ತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಗೇಟ್ ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗುವುದು. ಜೊತೆಗೆ ಮತ್ತೆ ಜಲಾಶಯ ತುಂಬಲಿದೆ. ಆಗ ನಾನೇ ಬಂದು ಬಾಗಿನ ಅರ್ಪಿಸುವೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದರು. ಅವರ ಮಾತಿನಂತೆ ಮತ್ತೆ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗಿ ಸುಮಾರು 40 ಟಿಎಂಸಿ ಅಷ್ಟು ನೀರು ಹರಿದುಬಂದು ಇಂದು ಜಲಾಶಯ ಭರ್ತಿಯಾಗಿದ್ದು, ಬಾಗಿನ ಅರ್ಪಿಸುವ ಕಾರ್ಯವು ಜರುಗಿತು.
ಆ ನಿಮಿತ್ತ ತುಂಗಭದ್ರಾ ಜಲಾಶಯ ಇಂದು ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ತಳಿರು ತೋರಣಗಳಿಂದ ಅಲಂಕಾರಗೊಂಡಿದ್ದು, ಜಲಾಶಯದ ಸೇತುವೆಯ ಮೇಲೆ ಕನ್ನಡ ಧ್ವಜಗಳು ರಾರಾಜಿಸಿವೆ.
ಕ್ರಸ್ಟ್ ಗೇಟ್ 19 ಅವಘಡ: ಈ ವರ್ಷ ಉತ್ತಮ ಮಳೆಯಾದ ಪ್ರಯುಕ್ತ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗಿತ್ತು. ಎರಡು ಬೆಳೆ ಬೆಳೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ತ್ರಿವಳಿ ರಾಜ್ಯದ ಅನ್ನದಾತರಿಗೆ ಆಗಸ್ಟ್ 10ರ ಮಧ್ಯರಾತ್ರಿ 19ನೇ ಕ್ರಷ್ಟ ಗೇಟ್ ಚೈನ್ ಲಿಂಕ್ ಕಟ್ಟಾಗಿ ಆಘಾತ ಎದುರಾಗಿತ್ತು. ಅಂದು ತುಂಗಭದ್ರಾ ಡ್ಯಾಂನಲ್ಲಿ 100 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ 19ನೇ ಗೇಟ್‌ಗೆ ಹೊಸ ಗೇಟ್ ಅಳವಡಿಕೆ ಮಾಡಬೇಕೆಂದರೆ ಕನಿಷ್ಠ 20 ಅಡಿಯಷ್ಟು ನೀರಿನ ಮಟ್ಟವನ್ನು ಕೆಳಗೆ ಇಳಿಸಬೇಕಾಗಿತ್ತು. ಅಂದರೆ ಡ್ಯಾಂನಲ್ಲಿರುವ ಒಟ್ಟು ನೀರಿನಲ್ಲಿ ಸುಮಾರು 60 ಟಿಎಂಸಿ ನೀರನ್ನು ನದಿಗೆ ಬಿಡಬೇಕಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದರು. ಅದರಂತೆ ಒಟ್ಟು 33 ಕ್ರಸ್ಟ್ ಗೇಟ್ಗಳ ಮೂಲಕ ಪ್ರತಿ ದಿನವು 10 ಟಿಎಂಸಿ ನೀರು ನದಿಪಾತ್ರದಿಂದ ಹೊರಗೆ ಬಿಡುವ ಯೋಚನೆ ಮಾಡಲಾಗಿತ್ತು. ಆದರೆ ತಜ್ಞರ ತಂಡ ಕೇವಲ 40 ಟಿಎಂಸಿ ರಷ್ಟು ನೀರನ್ನು ಮಾತ್ರ ತೆಗೆದು ಗೇಟ್ ಅಳವಡಿಸುವಲ್ಲಿ ಯಶಸ್ವಿಯಾಗಿತ್ತು. ಈಗ ತಾತ್ಕಾಲಿಕ ಕ್ರಸ್ಟ್ ಗೇಟ್ ಹಾಕಿದ 25 ದಿನದ ಬಳಿಕ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದು ಮತ್ತೆ ಜಲಾಶಯ ಭರ್ತಿಯಾಗಿದೆ.
ಐದು ವರ್ಷಗಳ ಹಿಂದೆ ಸಂಭವಿಸಿತ್ತೊಂದು ಲಘು ದುರಂತ: 2019 ರಲ್ಲಿ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ (ಮುನಿರಾಬಾದ್) ಬಳಿ ಗೇಟ್ ಮುರಿದಿತ್ತು. ಆಗಲೂ ಸಹಿತ ನಾಲ್ಕು ದಿನಗಳ ಕಾಲ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಅಂದು ವಿವಿಧ ತಜ್ಞರ ತಂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ, 10 ದಿನಗಳ ಕಾಲ ಸಮಸ್ಯೆ ಬಗೆಹರಿಸಲು ಹರಸಾಹಸ ಪಟ್ಟಿದ್ದರು.
ಇದನ್ನೂ ಓದಿ: ಚನ್ನಪಟ್ಟಣವನ್ನು ಚಿನ್ನದ ನಾಡು ಮಾಡಲು ತೀರ್ಮಾನಿಸಿದ್ದೇವೆ: ಡಿಸಿಎಂ ಡಿಕೆಶಿ - D K Shivakumar