ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಉಲ್ಬಣಿಸುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಸೋಮವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಿಎಂ, ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಅಧಿಕಾರಿಗಳು, ಜಲಮಂಡಳಿ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕಳೆದೊಂದು ತಿಂಗಳಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಒಂದೆಡೆ ಕಾವೇರಿ ನೀರಿನ ಅಭಾವ, ಇನ್ನೊಂದೆಡೆ ಬರಿದಾದ ಕೊಳವೆ ಬಾವಿಗಳು, ಇದರ ಮಧ್ಯೆ ಖಾಸಗಿ ಟ್ಯಾಂಕರ್ಗಳ ಹಗಲು ದರೋಡೆಯಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ.
ಇದನ್ನೂ ಓದಿ: ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬೆಂಗಳೂರಿಗಾಗಿ ಹರಿಬಿಡಲಾಗಿದೆ: ನೀರಾವರಿ ಇಲಾಖೆ ಸ್ಪಷ್ಟನೆ
ಪ್ರತಿಪಕ್ಷಗಳು ಇದು ಸರ್ಕಾರದ ವೈಫಲ್ಯವೆಂದು ಆರೋಪಿಸಿ ಈಗಾಗಲೇ ಪ್ರತಿಭಟನೆ ನಡೆಸುತ್ತಿವೆ. ಲೋಕಸಭೆ ಚುನಾವಣೆಯ ಬೆನ್ನಲ್ಲೇ ಬೆಂಗಳೂರಲ್ಲಿ ನೀರಿನ ಬವಣೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ಇದನ್ನೂ ಓದಿ: ಈಜುಕೊಳಗಳಿಗೆ ಕಾವೇರಿ ನೀರು ಬಳಕೆ ನಿಷೇಧಿಸಿ ಬೆಂಗಳೂರು ಜಲಮಂಡಳಿ ಆದೇಶ
ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಗರದ ನೀರಿನ ಸಮಸ್ಯೆ ಪರಿಹರಿಸಲು ಯತ್ನಿಸಿದ್ದರು. ಆದರೂ ಸಮಸ್ಯೆ ತೀವ್ರಗೊಳ್ಳುತ್ತಿದೆ. ಖಾಸಗಿ ಟ್ಯಾಂಕರ್ಗಳು ನೋಂದಾಯಿಸಿಕೊಳ್ಳುವಂತೆ ಡಿಸಿಎಂ ಖಡಕ್ ಸೂಚನೆ ಕೊಟ್ಟರೂ, ಅತ್ಯಲ್ಪ ಸಂಖ್ಯೆಯಲ್ಲಿ ಟ್ಯಾಂಕರ್ಗಳು ನೋಂದಣಿ ಮಾಡಿಸಿಕೊಂಡಿವೆ.
ಇದನ್ನೂ ಓದಿ: ಹೆಚ್ಚುತ್ತಿದೆ ತಾಪಮಾನ: ಬೇಸಿಗೆಯಲ್ಲಿ ಪ್ರತಿನಿತ್ಯ ಎಷ್ಟು ಪ್ರಮಾಣದ ನೀರು ಕುಡಿಯಬೇಕು?
ಕುಡಿಯುವ ನೀರು ಪೋಲು ಮಾಡಿದ್ರೆ ದಂಡ: ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮ ಉಂಟಾಗಿರುವುದರಿಂದ ಕುಡಿಯುವ ನೀರನ್ನು ಸ್ವಚ್ಛತೆ, ಕೈತೋಟ, ಕಟ್ಟಡ ನಿರ್ಮಾಣ ಸೇರಿ ಅನ್ಯ ಉದ್ದೇಶಕ್ಕೆ ಬಳಸಿದರೆ ದಂಡ ವಿಧಿಸುವುದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈಗಾಗಲೇ ಆದೇಶ ಹೊರಡಿಸಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಜಲಮಂಡಳಿ ಕಾಯ್ದೆ 1964ರ ಕಲಂ 109ರಂತೆ 5,000 ರೂಪಾಯಿಗಳ ದಂಡ ವಿಧಿಸಲಾಗುವುದು. ಉಲ್ಲಂಘನೆ ಮರುಕಳಿಸಿದಲ್ಲಿ ದಂಡದ ಮೊತ್ತದ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ದಿನಕ್ಕೆ 500 ರೂಪಾಯಿ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿತ್ತು.