ಬೆಂಗಳೂರು: ''ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪಕ್ಕಾಗಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸಾವಿನ ಕುರಿತಾಗಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಸಭೆಯ ಬಳಿಕ ಮಾತನಾಡಿದ ಸಿಎಂ, ''ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿರುವ ಪಶ್ಚಿಮ ಬಂಗಾಳ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅದರ ವಿರುದ್ಧ ಪ್ರಾಸಿಕ್ಯೂಷನ್ಗೆ ಒಳಪಡಿಸುವಂತೆ ತಿಳಿಸಿದ್ದೇನೆ'' ಎಂದರು.
''ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಜೊತೆಗೆ, ಡ್ರಗ್ ಪೂರೈಸಿದ ಕಂಪನಿಯಿಂದಲೂ ಪರಿಹಾರವನ್ನು ವಸೂಲು ಮಾಡಿ, ಮೃತರ ಕುಟುಂಬಕ್ಕೆ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಈ ರೀತಿಯ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಅಭಿವೃದ್ಧಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ'' ಎಂದರು.
ತಮಿಳುನಾಡು ಮಾದರಿಯಲ್ಲಿ ಔಷಧ ಖರೀದಿ: ''ಬಾಣಂತಿಯರಿಗೆ ನೀಡಲಾಗಿರುವ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಎಲ್ಲಾ ಬ್ಯಾಚ್‌ಗಳ ಬಳಕೆಯನ್ನು ಹಿಂಪಡೆಯಲಾಗಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಸಲಾದ ದ್ರಾವಣ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಈ ರೀತಿಯ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಅಭಿವೃದ್ಧಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು. ಉಲ್ಲೇಖಿತ ಡ್ರಗ್ನಿಂದ ರಾಜ್ಯದ ಇತರೆಡೆಗಳಲ್ಲಿ ಸಮಸ್ಯೆ ಆಗಿದೆಯೇ ಎನ್ನುವ ಬಗ್ಗೆ ತಕ್ಷಣ ಸಮಗ್ರ ವರದಿ ತರಿಸಿಕೊಳ್ಳಲು ಖಡಕ್ ಸೂಚನೆ ನೀಡಲಾಗಿದೆ. ಜೊತೆಗೆ, ತಮಿಳುನಾಡು ಮಾದರಿಯಲ್ಲಿ ಔಷಧಿಗಳ ಖರೀದಿ ಪ್ರಕ್ರಿಯೆ ಹಾಗೂ ಔಷಧ ನಿಯಂತ್ರಣ ಇಲಾಖೆಯನ್ನು ಪುನಾರಚನೆ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ'' ಎಂದು ಸಿಎಂ ಹೇಳಿದರು.
''ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಘಟನೆಗೆ ಜವಾಬ್ದಾರರಾದ ಪ್ರತಿಯೊಬ್ಬರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಡ್ರಗ್ ಕಂಟ್ರೋಲರ್ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಔಷಧ ನಿಯಂತ್ರಣ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ'' ಎಂದರು.
ಮೆಡಿಸಿನ್ ಮಾಫಿಯಾ ನಿಯಂತ್ರಣಕ್ಕೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ಹಲವರಿಂದ ವ್ಯಕ್ತವಾದವು. ಮೊದಲಿಗೆ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುವುದು ಹಾಗೂ ತಮಿಳುನಾಡು ಮಾದರಿಯಲ್ಲಿ ಡ್ರಗ್ ನಿಯಂತ್ರಣಕ್ಕೆ ಹೊಸ ರೂಪುರೇಷೆ, ನಿಯಮಾವಳಿ ರಚಿಸುವ ಬಗ್ಗೆ ಚರ್ಚಿಸಲಾಯಿತು.
ಐವಿ ದ್ರಾವಣದ ಮೇಲೆ ಅನುಮಾನವೆಂದ ಸಚಿವರು: ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ''ನಮಗೆ ಅನುಮಾನ ಇರುವುದು ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಮೇಲೆ. ಅದರೆ ಲ್ಯಾಬ್ ಟೆಸ್ಟಿಂಗ್ ವರದಿ ಬರಬೇಕಿದೆ. ಈಗಾಗಲೇ ಅನರೋಬಿಕ್ ಟೆಸ್ಟ್ ಗೆ ಕಳಿಸಲಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 2,600 ಸರ್ಜರಿಗಳು ನಡೆದಿವೆ. ಸಾಕಷ್ಟು ಸಿಸೇರಿಯನ್ ಮಾಡಿದ್ದಾರೆ, ಯಾರೊಬ್ಬರ ಸಾವು ಸಂಭವಿಸಿರಲಿಲ್ಲ. ಮೊದಲ ಬಾರಿಗೆ ನಾಲ್ವರು ಬಾಣಂತಿಯರ ಸಾವಾಗಿರುವುದು ನಮಗೆ ಐವಿ ದ್ರಾವಣದ ಮೇಲೆ ಅನುಮಾನ ಬರುವಂತೆ ಆಗಿದೆ. ಈಗ ತಜ್ಞರ ಸಮಿತಿ ರಚಿಸಲಾಗಿದ್ದು, ಎಲ್ಲವನ್ನೂ ಪರಿಶೀಲನೆ ಮಾಡಲಿದ್ದಾರೆ'' ಎಂದು ಹೇಳಿದರು.
''ದ್ರಾವಣ ಗುಣಮಟ್ಟದ ಪರೀಕ್ಷೆಗೆ ಕಳಿಸಿದ್ದೇವೆ. ವರದಿ ಬರಲು 8-9 ದಿನಗಳ ಆಗಬಹುದು. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಸ್ಟ್ಯಾಂಡರ್ಡ್ ಕ್ವಾಲಿಟಿ ಇದೆ ಎಂದು ಡ್ರಗ್ ಕಂಟ್ರೋಲ್ ನವರು ಹೇಳಿದ ಕೆಲವು ಬ್ಯಾಚ್ಗಳನ್ನ ಮಾತ್ರ ಔಷಧಿ ಸರಬರಾಜು ನಿಗಮ ಆಸ್ಪತ್ರೆಗಳಿಗೆ ನೀಡಿತ್ತು. ಬಳ್ಳಾರಿ ಪ್ರಕರಣದಲ್ಲಿ ಡಾಕ್ಟರ್ ಎಲ್ಲರೂ ಸರಿಯಾಗಿ ಕೆಲಸ ಮಾಡಿದ್ದಾರೆ. ಅವರ ತಪ್ಪಿಲ್ಲ ಎಂಬ ವರದಿಯನ್ನು ತಜ್ಞರ ಸಮಿತಿ ನೀಡಿದೆ'' ಎಂದರು.
ಪ್ರಾಸಿಕ್ಯೂಟ್ ಮಾಡಬಹುದು: ''ನಮ್ಮ ಡ್ರಗ್ ಕಂಟ್ರೋಲ್ ಡಿಪಾರ್ಟ್ಮೆಂಟ್ ಪರೀಕ್ಷಿಸಿದಾಗ 22 ಬ್ಯಾಚ್‌ಗಳ ಐವಿ ದ್ರಾವಣ ಸ್ಟ್ಯಾಂಡರ್ಡ್ ಕ್ವಾಲಿಟಿ ಇಲ್ಲ ಎಂಬ ವರದಿಯಿದೆ. ಇದರ ಆಧಾರದ ಮೇಲೆ ನಾವು ಕಂಪನಿಯವರ ವಿರುದ್ಧ ಪ್ರಾಸಿಕ್ಯೂಟ್ ಮಾಡಬಹುದಾಗಿದೆ'' ಎಂದು ಸಚಿವ ಗುಂಡೂರಾವ್ ತಿಳಿಸಿದರು.
ಸಭೆಯಲ್ಲಿ ಅಧಿಕಾರಿಗಳ ಮಾಹಿತಿ: ನವೆಂಬರ್ 11ರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿನ ಪ್ರಕರಣ ವರದಿಯಾಗಿದೆ. ಹಿಮೋಡಯಾಲಿಸಿಸ್ ಮತ್ತು ಬಹು ಅಂಗಗಳ ವೈಫಲ್ಯ ಹಾಗೂ ತೀವ್ರತರ ಮೂತ್ರಪಿಂಡದ ಗಾಯದಂತಹ ತೊಂದರೆಗಳ 7 ಪ್ರಕರಣಗಳಲ್ಲಿ 4 ಬಾಣಂತಿಯರು ಸಾವಿಗೀಡಾಗಿದ್ದಾರೆ. ಉಳಿದ 3 ರೋಗಿಗಳಲ್ಲಿ 2 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬಾಣಂತಿಯರ ಸಾವಿನ ಕುತು ತಜ್ಞರ ಸಮಿತಿ ರಚಿಸಿ ಘಟನಾವಳಿಗಳ ಬಗ್ಗೆ ಪ್ರಾಥಮಿಕ ವರದಿ ಪಡೆಯಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.