ಬೆಂಗಳೂರು: 15ನೇ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ತಮ್ಮ ಎರಡನೇ ಅವಧಿಯ ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ಸೂಟ್ಕೇಸ್ಗೆ ಬೈ ಹೇಳಿದ್ದಾರೆ. ಅದಕ್ಕೆ ಪರ್ಯಾಯವಾಗಿ ಲಿಡ್ಕರ್ ಸಂಸ್ಥೆಯ ಚರ್ಮದ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತಂದು ಗಮನ ಸೆಳೆದರು. ಈ ಮೂಲಕ ಸಿಎಂ ಹೊಸ ಸಂಪ್ರದಾಯಕ್ಕೆ ನಾಂದಿ ಸಹ ಹಾಡಿದ್ದಾರೆ.
ಪ್ರತಿ ಬಾರಿ ಬಜೆಟ್ ದಾಖಲೆಗಳನ್ನು ಕೊಂಡೊಯ್ಯಲು ಬ್ರೀಫ್‌ಕೇಸ್ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ಬಾರಿಯ ದಾಖಲೆಗಳನ್ನು ಕೊಂಡೊಯ್ಯಲು ಲಿಡ್ಕರ್ ಸಂಸ್ಥೆಯ ಲೆದರ್ ಬ್ಯಾಗ್ ಬಳಸಲಾಗುತ್ತಿದೆ. ವಿಧಾನಸೌಧಕ್ಕೂ ತೆರಳುವ ಮುನ್ನ ಲೆದರ್ ಬ್ಯಾಗ್ ಸಹಿತ ಸಿಎಂ ಸಿದ್ದರಾಮಯ್ಯ ಫೋಟೋಗಳು ಫೋಸ್ ನೀಡಿದರು.
ಸಿದ್ದರಾಮಯ್ಯ ಅವರು ಈವರೆಗೆ ಬರೋಬ್ಬರಿ 14 ಬಜೆಟ್‌ಗಳನ್ನು ಮಂಡನೆ ಮಾಡಿದ ಖ್ಯಾತಿ ಹೊಂದಿದ್ದು, ಯಾವಾಗಲೂ ಹಳೆಯ ಸಂಪ್ರದಾಯದಂತೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತಂದು ಅದನ್ನು ರಾಜ್ಯದ ಜನತೆಗೆ ತೋರಿಸಿ ಬಜೆಟ್ ಮಂಡನೆ ಮಾಡುತ್ತಿದ್ದರು. ಆದರೆ, ಈ ಬಾರಿ ಮೊದಲ ಬಾರಿಗೆ ತಮ್ಮ ಸಂಪ್ರದಾಯವನ್ನು ಬದಲಿಸಿಕೊಂಡಿದ್ದು, ಈ ಹಿಂದಿನ ಸಂಪ್ರದಾಯದಂತೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರದೇ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಸಂಸ್ಥೆಯ ಚರ್ಮದ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತುಂಬಿಕೊಂಡು ಬಂದು ಬಜೆಟ್ ಮಂಡನೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಡ್ಕರ್ ಸಂಸ್ಥೆಗೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದ್ದು, ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ ಅವರು ಲಿಡ್ಕರ್ ಸಂಸ್ಥೆಗೆ ರಾಯಭಾರಿ ಆಗಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಲಿಡ್ಕರ್ ಸಂಸ್ಥೆಯ ಲೆದರ್ ಬ್ಯಾಗ್ ಬಳಕೆ ಮಾಡಿದ್ದಕ್ಕೆ ಹೆಚ್ಚು ಮುನ್ನೆಲೆಗೆ ಬಂದಿದೆ.
ಇನ್ನು ಬಜೆಟ್ ಭಾಷಣದ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಿತ್ರರಂಗ ಕಂಡ ಮೇರುನಟ ದಿ. ಡಾ. ರಾಜ್ಕುಮಾರ್ ಮುಖ್ಯಭೂಮಿಕೆಯ 'ಬಂಗಾರದ ಮನುಷ್ಯ 'ಸಿನಿಮಾದ ಹಾಡಿನ ಸಾಲುಗಳನ್ನು ಹೇಳುತ್ತಾ ಬಜೆಟ್ ಮಂಡನೆ ಪ್ರಾರಂಭಿಸಿದರು. ಬಂಗಾರದ ಮನುಷ್ಯ ಮಾತ್ರವಲ್ಲದೇ ಕಳೆದ ವರ್ಷ ಬಿಡುಗಡೆ ಆದ ಡಾಲಿ ಧನಂಜಯ್ ನಿರ್ಮಾಣದ, ಶಶಾಂಕ್ ಸೋಗಲ್ ನಿರ್ದೇಶನದ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾದ ಸಾಲುಗಳನ್ನು ಕೂಡ ಬಳಸಿಕೊಳ್ಳಲಾಗಿದೆ
ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಗಳನ್ನು ತರಲು ಸೂಟ್‌ಕೇಸ್ ಬದಲಾಗಿ ಬ್ಯಾಗ್ ಬಳಕೆ ಮಾಡಿದ್ದರು. ಆದರೆ, ಈ ಬಾರಿ 2024ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆಗೆ ಟ್ಯಾಬ್ ಬಳಕೆ ಮಾಡಿದ್ದನ್ನು ಇಲ್ಲಿ ಗಮನಿಸಬಹುದು.
ಇದನ್ನೂ ಓದಿ: ಬಜೆಟ್ ಮಂಡನೆಗೆ ಕ್ಷಣಗಣನೆ: ಪಂಚ ಗ್ಯಾರಂಟಿಗೆ ಹಣ ಬಲ, ತೆರಿಗೆ ಭಾರವಿಲ್ಲದ ಉಳಿತಾಯ ಬಜೆಟ್ ಸಾಧ್ಯತೆ