ಹಾವೇರಿ: ಶಿಗ್ಗಾಂವ್ ಉಪಚುನಾವಣೆ ಹಿನ್ನೆಲೆಯಲ್ಲಿ ನಿನ್ನೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಶಿಗ್ಗಾಂವ್ ತಾಲೂಕಿನ ಗಂಗೀಭಾವಿ ರೆಸಾರ್ಟ್ನಲ್ಲಿ ಕುರುಬ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದರು. ಈ ವೇಳೆ ಕಾಂಗ್ರೆಸ್ಗೆ ಮತ ಹಾಕುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಬೊಮ್ಮಾಯಿ ಪರ ಪ್ರಚಾರ ಮಾಡಲು ಬರಬೇಡಿ ಎಂದು ಕಾಗಿನೆಲೆ ಸ್ವಾಮೀಜಿ ಅವರಿಗೆ ಹೇಳಿದ್ದೇನೆ. ಒಂದು ವೇಳೆ ಬೊಮ್ಮಾಯಿ ಪರ ಸ್ವಾಮೀಜಿ ಪ್ರಚಾರ ಮಾಡಿ ಅಂದರೂ ನೀವು ಕಾಂಗ್ರೆಸ್ಗೆ ಮತ ಹಾಕಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಬೊಮ್ಮಾಯಿ ಹಿಂದೆ ಕಾಗಿನೆಲೆ ಮಠಕ್ಕೆ ದುಡ್ಡು ಕೊಟ್ಟಿದ್ದು, ಅವರ ಕೈಯಿಂದ ಕೊಟ್ಟಿದ್ದಲ್ಲ. ಸರ್ಕಾರದ ದುಡ್ಡು ಕೊಟ್ಟಿದ್ದರು. ಹೀಗಾಗಿ ಹಿಂದೆ ಸ್ವಾಮೀಜಿ ಬೊಮ್ಮಾಯಿ ಪರ ಪ್ರಚಾರ ಮಾಡಿದ್ದರು. ಈಗ ಯಾವುದೇ ಕಾರಣಕ್ಕೂ ಬೊಮ್ಮಾಯಿಗೆ ಬೆಂಬಲಿಸಬೇಡಿ ಅಂತಾ ಮನವಿ ಮಾಡಿರುವೆ. ಕಾಗಿನೆಲೆ ಮಠ ಮಾಡಿದ್ದು ಯಾರು? ಬೊಮ್ಮಾಯಿನಾ? ಎಂದು ಪ್ರಶ್ನಿಸಿದರು.
ನಾನು 15 ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ. ಮುಂದೆ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ನನ್ನ ಮೇಲೆ ಯಾವುದೆ ಕಪ್ಪು ಚುಕ್ಕಿ ಇಲ್ಲ. ನಾನು ಅಪ್ರಮಾಣಿಕನಾಗಿದ್ದರೆ ಕೋಟಿಗಟ್ಟಲೇ ಸಂಪಾದನೆ ಮಾಡಬಹುದಿತ್ತು. ನಾನು ಆ ಕೆಲಸ ಮಾಡಿಲ್ಲ. ಇವತ್ತಿನವರೆಗೂ ನನಗೆ ಮೈಸೂರಿನಲ್ಲಿ ಒಂದು ಸ್ವಂತ ಮನೆ ಇಲ್ಲ. ಆದರೂ ನನ್ನ ಮೇಲೆ ಕಪ್ಪು ಚುಕ್ಕೆ ಹೊರಿಸಿ ಅಧಿಕಾರದಿಂದ ಇಳಿಸಬೇಕು, ಅವಮಾನ ಮಾಡಬೇಕು ಎಂದು ಹುನ್ನಾರ ನಡೆಸಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ನನ್ನ ವಿರುದ್ಧದ ಹುನ್ನಾರಕ್ಕೆ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ, ದೇವೇಗೌಡರ ಮಕ್ಕಳು, ಅಶೋಕ ಎಲ್ಲರೂ ಕೈ ಜೋಡಿಸಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ನೀವು ಉತ್ತರ ಕೊಡಬೇಕು ಎಂದು ಸಿಎಂ ತಿಳಿಸಿದರು.
ಹೆಚ್ಡಿಕೆ ವಿರುದ್ಧ ಕಿಡಿ: ಕುರುಬ ಸಮಾಜದ ಮುಖಂಡರ ಸಭೆ ನಡೆಸಿ ಹೊರಬಂದ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬರೀ ಸುಳ್ಳು ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ವೇಳೆ, ಕುಮಾರಸ್ವಾಮಿ ವಿರುದ್ಧದ ಎಫ್ಐಆರ್ ಕುರಿತ ಪ್ರಶ್ನೆಗೆ ಮಾಧ್ಯಮಗಳ ಮೇಲೆ ಸಿಎಂ ಸಿಡಿಮಿಡಿಗೊಂಡು ಬಹಿರಂಗ ಪ್ರಚಾರ ಸಭೆಗೆ ತೆರಳಿದರು.