ಮೈಸೂರು: ಚಾಮುಂಡೇಶ್ವರಿ ತಾಯಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪಸ್ಥಿತರಿದ್ದರು.
750 ಕೆ.ಜಿ.ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ ಮತ್ತು ಹಿರಣ್ಯ ಸಾಥ್ ನೀಡಿದ್ದು, ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪಥ್ ಆನೆಯಾಗಿ ಗೋಪಿ, ಸಾಲಾನೆಯಾಗಿ ಏಕಲವ್ಯ , ಪ್ರಶಾಂತ್ , ಮಹೇಂದ್ರ , ಸುಗೀವಾ, ಕಂಜನ್, ಭೀಮಾ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀಗೂ ಹೆಚ್ಚು ದೂರ ಹೆಜ್ಜೆ ಹಾಕುತ್ತಿವೆ. ಜಂಬೂ ಸವಾರಿಯ ಮುಂದೆ ಅಶ್ವದಳ , ಪೊಲೀಸ್ ವಾದ್ಯ ವೃಂದ ಮುಂದೆ ಸಾಗುತ್ತಿವೆ.
ತಡವಾಗಿ ನೆರವೇರಿದ ಪುಷ್ಪಾರ್ಚನೆ: ಸಂಜೆ 4 ರಿಂದ 4.30 ರ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ 5 ಗಂಟೆ 2 ನಿಮಿಷಕ್ಕೆ ತಡವಾಗಿ ಪುಷ್ಪಾರ್ಚನೆ ಮಾಡಲಾಯಿತು.
ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ- ವಿದೇಶ ಮತ್ತು ನೆರೆಹೊರೆಯ ಜಿಲ್ಲೆಯ ಲಕ್ಷಾಂತರ ಮಂದಿ ರಾಜ ಬೀದಿಗಳಲ್ಲಿ ಕಿಕ್ಕಿರಿದು ಸೇರಿದ್ದರು.
ಇದಕ್ಕೂ ಮುನ್ನ ನಾಡಿನ ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಿಂಬಿಸುವ ಸುಮಾರು 51 ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳ ಮೆರವಣಿಗೆ ಜರುಗಿತು.
ಬೆಳಗ್ಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ದೇವರನ್ನು ಅರಮನೆಗೆ ಕರೆತರಲಾಯಿತು. ಬೆಳಗ್ಗೆ 10.15ರ ಸುಮಾರಿಗೆ ಉತ್ತರ ಪೂಜೆಯ ಬಳಿಕ ಆನೆ ಬಾಗಿಲಿನ ಮುಂಭಾಗದಲ್ಲಿ ಜಟ್ಟಿ ಕಾಳಗ ಜರುಗಿತು. ಬಳಿಕ ವಿಜಯಯಾತ್ರೆ ಹೊರಡುವ ಕನ್ನಡಾಂಬೆ ದೇವಾಲಯದ ಒಳಭಾಗದಲ್ಲಿರುವ ಬನ್ನಿ ಮರಕ್ಕೆ ಯದುವೀರ್ ಪೂಜೆ ಸಲ್ಲಿಸಿದರು. ತದನಂತರ ರಾಜವಂಶಸ್ಥರು ಮನೆಗೆ ಮರಳುವ ಮೂಲಕ ನವರಾತ್ರಿಯ 10 ದಿನದ ಧಾರ್ಮಿಕ ಕಾರ್ಯಗಳು ಸಂಪನ್ನಗೊಂಡವು.
ಇದನ್ನೂ ಓದಿ: LIVE: ವಿಶ್ವವಿಖ್ಯಾತ ಮೈಸೂರು ದಸರಾ; ವಿಜಯದಶಮಿ ಜಂಬೂ ಸವಾರಿ ಮೆರವಣಿಗೆ