ಚಿಕ್ಕೋಡಿ: ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನು ಅರ್ಜಿ ವಜಾ ಆಗಿರುವುದರಿಂದ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ಸಂಜೆ ಹೆಚ್.ಡಿ. ರೇವಣ್ಣ ಬಂಧನ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲ್ಲ. ಏಕೆಂದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣದ ಬಗ್ಗೆ ನಾನು ಕೂಡಾ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಒಂದು ಅಪಹರಣ ಪ್ರಕರಣದಲ್ಲಿ ರೇವಣ್ಣ ಜಾಮೀನು ಅರ್ಜಿ ಹಾಕಿದ್ದರು. ಆದರೆ, ಆ ಅರ್ಜಿ ವಜಾ ಆಗಿರಬೇಕು. ಆದ್ದರಿಂದ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿರಬೇಕು ಅನಿಸುತ್ತದೆ ಎಂದು ತಿಳಿಸಿದರು.
ಇದೇ ವೇಳೆ, ಕಿಡ್ನಾಪ್ ಆಗಿದ್ದ ಮಹಿಳೆ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ''ಈ ವಿಚಾರ ನನಗೆ ಗೊತ್ತಿಲ್ಲ. ಪೊಲೀಸರಿಂದ ಮಾಹಿತಿ ತೆಗೆದುಕೊಂಡು ಮಾತನಾಡುತ್ತೇನೆ'' ಎಂದರು. ಅಲ್ಲದೇ, ಪ್ರಜ್ವಲ್ ರೇವಣ್ಣ ನೇರವಾಗಿ ಕೋರ್ಟ್ಗೆ ಹಾಜರಾಗುತ್ತಾರೆ ಎಂದು ಸಿ.ಎಸ್. ಪುಟ್ಟರಾಜು ಹೇಳಿಕೆ ವಿಚಾರವಾಗಿ ಮಾತನಾಡಿ, ''ಅವರೇನೂ ಲಾಯರಾ?, ಪೊಲೀಸರ ಜೊತೆ ನಾನು ಮಾತನಾಡುತ್ತೇನೆ'' ಎಂದಷ್ಟೇ ಹೇಳಿದರು.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ನಿರಾಕರಣೆ ಬೆನ್ನಲ್ಲೇ ಹೆಚ್.ಡಿ. ರೇವಣ್ಣ ವಶಕ್ಕೆ ಪಡೆದ ಎಸ್ಐಟಿ
ಡಿಸಿಎಂ ಡಿಕೆಶಿ ಪ್ರತಿಕ್ರಿಯೆ: ಮತ್ತೊಂದೆಡೆ, ಗದಗನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಪ್ರತಿಕ್ರಿಯಿಸಿ, ''ನ್ಯಾಯಾಲಯ ಉಂಟು.. ಕಾನೂನುಂಟು. ನಾವು ಯಾವುದಕ್ಕೂ ಭಾಗಿಯಾಗಲ್ಲ. ನಮಗೆ ಅವಶ್ಯಕತೆ ಇಲ್ಲ. ಕೋರ್ಟ್, ಕಾನೂನಲ್ಲಿ ಏನಾದ್ರೂ ರಕ್ಷಣೆ ಪಡೆದುಕೊಳ್ಳಲಿ. ನಾವು ವಿಚಾರಕ್ಕೆ ಹೋಗಲ್ಲ. ಕುಮಾರಣ್ಣ ಆರಂಭದಲ್ಲಿ ಏನೋ ಹೇಳಿದ್ದಾರೆ. ಅದಕ್ಕೆ ಬದ್ಧ'' ಎಂದು ಹೇಳಿದರು.
ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಮಾತನಾಡಿ, ''ಮಾಜಿ ಮಂತ್ರಿಗಳಾದ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಂಡಿದೆ. ಅವರ ವಿರುದ್ಧ ಇರುವ ಆಪಾದನೆ ಹಿನ್ನೆಲೆ ಕೇಸ್ ದಾಖಲಾಗಿತ್ತು. ಕೆಲವು ಪುರಾವೆ ಲಭ್ಯವಾಗಿದ್ದು, ಬಂಧನ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ, ಅವರನ್ನ ಸಹ ಬಂಧಿಸುವ ಕಾರ್ಯ ಜಾರಿಯಲ್ಲಿದೆ'' ಎಂದು ತಿಳಿಸಿದರು.
ಶಾಸಕ ವಿನಯ್ ಕುಲಕರ್ಣಿ ಮಾತನಾಡಿ, ''ದೂರಿನ ಆಧಾರದ ಮೇಲೆ ಸಹಜವಾಗಿ ಕಾನೂನು ಕ್ರಮ ಕೈಗೊಂಡಿದೆ. ಮಹಿಳೆಯರಿಗೆ ಆದಂತಹ ಅಗೌರವ ಗಮನಿಸಿದ್ರೆ ಬಹಳ ನೋವಾಗುತ್ತದೆ. ಚುನಾವಣೆ ಲಾಭದ ಪ್ರಶ್ನೆ ಏನೂ ಇಲ್ಲ, ಅವರು ಏನು ಅಂತ ಜನಕ್ಕೆ ಗೊತ್ತಾಗಿದೆ. ಪ್ರಜ್ವಲ್ ಬಂಧನಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು'' ಎಂದರು.
ಇದನ್ನೂ ಓದಿ: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಆಂತರಿಕ ಕಲಹದ ಮಾಹಿತಿ, ಹೆಚ್ಡಿಕೆ ನಿಲುವು ಬದಲಿಸಿದ್ಯಾಕೆ?: ಡಿಕೆಶಿ