ಮೈಸೂರು: ''ರಾಜ್ಯದ ಜನತೆ ಬರಗಾಲದಿಂದ ತತ್ತರಿಸಿದ್ದರೂ ಕೂಡ ಸ್ಪಂದಿಸದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ಕೊಟ್ಟು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬರ ಘೋಷಣೆ ಆದ ಬಳಿಕ ನಾವು ಸೆಪ್ಟೆಂಬರ್ 23ರಂದೇ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೇವೆ. ಅಕ್ಟೋಬರ್ನಲ್ಲಿ ಕೇಂದ್ರ ತಂಡ ರಾಜ್ಯ ಪ್ರವಾಸ ಮಾಡಿ ಬರ ಕುರಿತಂತೆ ವರದಿ ನೀಡಿದೆ. ಈ ತಿಂಗಳಲ್ಲಿಯೇ ಮೂರು ಮನವಿಗಳನ್ನು ಸಲ್ಲಿಸಿದ್ದೇವೆ. ನಂತರ ಡಿಸೆಂಬರ್ 19ರಂದು ನಾನು ಖುದ್ದು ಪ್ರಧಾನ ಮಂತ್ರಿಗಳನ್ನು ಹಾಗೂ 20ರಂದು ಅಮಿತ್ ಶಾ ಅವರನ್ನು ಭೇಟಿಯಾಗಿ, ರಾಜ್ಯದ ಬರ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ತಿಳಿಸಿದ್ದೇನೆ. ಡಿಸೆಂಬರ್ 23ಕ್ಕೆ ಉನ್ನತ ಮಟ್ಟದ ಸಮಿತಿ ಸಭೆ ನಡೆಸುವುದಾಗಿ ಅಮಿತ್ ಶಾ ಅವರು ತಿಳಿಸಿದ್ದರು.
ಮನವಿ ಸಲ್ಲಿಸಿ ಐದು ತಿಂಗಳು ಕಳೆದಿದ್ದರೂ ಅಂದಿನಿಂದ ಇಂದಿನವರೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡಿಲ್ಲ. ಇವರಿಗೆ ಯಾವ ನೈತಿಕತೆ ಇದೆ. ದೇಶದ ಗೃಹ ಸಚಿವರಾದ ಅಮಿತ್ ಶಾ ಸತ್ಯವನ್ನೂ ನಾಚಿಸುವಂತೆ ಅಪ್ಪಟ ಸುಳ್ಳು ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ನಿರೂಪಿಸಲು ಸಿದ್ಧವಿದ್ದು, ಕೇಂದ್ರದ ಈ ಧೋರಣೆ ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಲಾಗಿದೆ ಎಂದರು.
ದೇಶದ ವಿವಿಧೆಡೆಗಳಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡಲು ಎಂದು 15ನೇ ಹಣಕಾಸು ಆಯೋಗದಂತೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಕೇಂದ್ರಕ್ಕೆ ನೀಡಲಾಗಿರುತ್ತದೆ. ಎನ್ಡಿಆರ್ಎಫ್ ಹಣ ರಾಜ್ಯಗಳಿಗೆ ಸೇರಿದ್ದು. ರಾಜ್ಯದ ಜನ ಬರಗಾಲದಿಂದ ತತ್ತರಿಸಿದ್ದರೂ ಸ್ಪಂದಿಸದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು ಎಂದು ಸಿಎಂ ಕರೆ ನೀಡಿದರು.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಮತ್ರಿ ಸಿದ್ದರಾಮಯ್ಯ ಪತ್ರಿಕಾ ಹೇಳಿಕೆ ಕೂಡ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ ವಿಳಂಬವಾಗಿ ಪರಿಹಾರ ಕೋರಿ ಮನವಿ ಸಲ್ಲಿಸಿತು. ಅಷ್ಟರೊಳಗಾಗಲೇ ಚುನಾವಣೆ ಘೋಷಣೆಯಾದ ಹಿನ್ನೆಲೆ, ಬರ ಪರಿಹಾರ ನೀಡಲು ಸಾಧ್ಯವಾಗಿಲ್ಲ, ಸುಳ್ಳನ್ನು ರಾಮನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನೀವು ಹೇಳಿದ್ದೀರಿ. ಆತ್ಮಸಾಕ್ಷಿ ಇಲ್ಲವೇ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ಸುದೀರ್ಘ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೇ ನಮ್ಮ ಸತ್ಯವನ್ನು ಸುಳ್ಳೆಂದು ಸಾಬೀತು ಮಾಡಿದರೆ, ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂಬ ಗಂಭೀರ ಸವಾಲನ್ನೂ ಎಸೆದಿದ್ದಾರೆ. ಒಂದು ವೇಳೆ ನಿಮ್ಮ ಮಾತನ್ನು ನಿಮಗೇನೆ ಸತ್ಯ ಎಂದು ಸಾಬೀತು ಮಾಡಲು ಸಾಧ್ಯವಾಗದಿದ್ದರೆ ನೀವೇನು ಮಾಡಬೇಕು ಎಂಬುದನ್ನೂ ನೀವೇ ನಿರ್ಧರಿಸಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಸುಳ್ಳುಗಳ ಮೂಲಕ ಬಿಜೆಪಿಯಿಂದ ಪ್ರಚಾರ ಸಭೆ ಆರಂಭ: ಸಿಎಂ ಸಿದ್ದರಾಮಯ್ಯ - CM Siddaramaiah