ಹುಬ್ಬಳ್ಳಿ: "ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಪ್ರತಿವರ್ಷ 4.5 ಲಕ್ಷ ಕೋಟಿ ರೂ. ತೆರಿಗೆಯನ್ನು ರಾಜ್ಯದಿಂದ ಕೋಡುತ್ತಿದ್ದೇವೆ. ಆದರೆ ರಾಜ್ಯಕ್ಕೆ ಸಿಗುತ್ತಿರುವುದು 55-60 ಸಾವಿರ ಕೋಟಿ ರೂ. ಮಾತ್ರ. ಇದು ನ್ಯಾಯ ಏನ್ರೀ? ಇದನ್ನು ಕೇಳಿದ್ರೆ ರಾಜಕೀಯ ಅಂತಾರೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ಯಾವತ್ತೂ ಅನುದಾನ ಕೊರತೆ ಬಗ್ಗೆ ಮಾತನಾಡಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಬೊಮ್ಮಾಯಿ ಮಾತನಾಡಿದ್ದಾರಾ? ನಾಲ್ಕೂವರೆ ಲಕ್ಷ ಕೋಟಿ ರೂ. ಕೊಟ್ಟು, 60 ಸಾವಿರ ಕೋಟಿ ತೆಗೆದುಕೊಳ್ಳುವುದು ಅನ್ಯಾಯ ಅಲ್ವೇ. ಹಣಕಾಸು ಆಯೋಗದ ಶಿಫಾರಸು ಆದಾರದ ಮೇಲೆ ಅನುದಾನ ಬರಬೇಕು, ಆದ್ರೆ ಅದನ್ನು ಕೊಡುತ್ತಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ 11,495 ಸಾವಿರ ಕೋಟಿ ಅನ್ಯಾಯ ಆಗಿದೆ. 5,495 ಕೋಟಿ ವಿಶೇಷ ಅನುದಾನ ಕೊಡಬೇಕು ಅಂಥ ಹೇಳಿದ್ದರು. ಪೇರಿಪೆರಿಯಲ್ ರಿಂಗ್ ರೋಡ್, ಕೆರೆ ಅಭಿವೃದ್ಧಿ ಇದನ್ನು ಮಿಸ್ಟರ್ ಜೋಶಿ ಇವರು ಕೇಳಬೇಕೋ, ಬೇಡ್ವಾ?. ಕೇಂದ್ರ ಈ ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ. ಅವರು ರಾಜಕೀಯ ಬಿಡುತ್ತಾರಾ? ಕೇಳಿ" ಎಂದು ಸವಾಲು ಹಾಕಿದರು.
2 ದಿನ ಶಿಗ್ಗಾಂವ್ ಕ್ಷೇತ್ರದಲ್ಲಿ ಪ್ರಚಾರ : "ಇಂದು ಮತ್ತು ನಾಳೆ, ಎರಡು ದಿನ ಶಿಗ್ಗಾಂವ್ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ನೂರಕ್ಕೆ ನೂರು ಈ ಬಾರಿ ಶಿಗ್ಗಾಂವ್ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬರಲು ಆಗಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಲೀಡ್ ಬಂದಿತ್ತು" ಎಂದರು.
ಇದೇ ವೇಳೆ ವಕ್ಫ್ ಆಸ್ತಿ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, "ಬಿಜೆಪಿ ಯಾವಾಗಲೂ ಸುಳ್ಳು ವಿಚಾರಗಳಿಗೆ ಹೋರಾಟ ಮಾಡೋದು. ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡೋದು. ಬಸವರಾಜ ಬೊಮ್ಮಾಯಿ ಇಂಚಿಂಚು ಭೂಮಿ ಒತ್ತವರಿ ತೆರವು ಮಾಡುವುದಾಗಿ ಹೇಳಿದ್ದರು. ಈಗ ಯಾಕೆ ವಿರೋಧಿಸುತ್ತಿದ್ದಾರೆ? ರಾಜಕಾರಣಕ್ಕಾಗಿ ಬೊಮ್ಮಾಯಿ ಮಾತನಾಡುತ್ತಿದ್ದಾರೆ. ಜನರಿಗೆ ಅರ್ಥವಾಗಿದೆ, ವಕ್ಫ್ ಆಸ್ತಿ ವಿವಾದ ವಿಚಾರ ನಿನ್ನೆ ಮೊನ್ನೆಯದಲ್ಲ. ಅವರ ಕಾಲದಲ್ಲೂ ನೋಟಿಸ್ ಕೊಟ್ಟಿದ್ದಾರೆ. ನಮ್ಮ ಕಾಲದಲ್ಲೂ ಕೊಟ್ಟಿದ್ದೇವೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ನೋಟಿಸ್ ಕೊಟ್ಟಿದ್ದರೂ, ವಾಪಸ್ ಪಡೆಯಲು ಹೇಳಿದ್ದೇನೆ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದು ಬೇಡ ಎಂದು ಹೇಳಿದ್ದೇನೆ ಎಂದರು.
"ಪ್ರತಾಪ್ ಸಿಂಹ ಒಬ್ಬ ಕೋಮುವಾದಿ, ಕೋಮುವಾದಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ..? ಅವರಿಗೆ ಸಂವಿಧಾನದ ಬಗ್ಗೆ, ಪ್ರಜಾಪ್ರಭುತ್ವ ಬಗ್ಗೆ ಗೌರವವಿಲ್ಲ. ಜಾತಿ, ಧರ್ಮದ ಹೆಸರಲ್ಲಿ ಸಮಾಜ ವಿಭಜನೆ ಮಾಡುವುದೇ ಅವರ ಕೆಲಸ" ಎಂದು ಸಿಎಂ ವಾಗ್ದಾಳಿ ನಡೆಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವುದು ಗ್ಯಾರಂಟಿ-ಬೊಮ್ಮಾಯಿ: ಹುಬ್ಬಳ್ಳಿ ನಗರದಲ್ಲಿ ಮಾಧ್ಯಮಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದರು. "ಇದೊಂದು ಯುಟರ್ನ್ ಸರ್ಕಾರ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೊಚ್ಚಿಹೋಗುವುದು ಗ್ಯಾರಂಟಿ. ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನರು ತಿರುಗಿಬಿದ್ದಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ವಕ್ಫ್ ಆಸ್ತಿ ಹೆಸರಿನಲ್ಲಿ ನೋಟಿಸ್ ಕೊಟ್ಟಿರುವುದಕ್ಕೆ ರಾಜ್ಯಾದ್ಯಂತ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ನೋಟಿಸ್ ವಾಪಸ್ ತೆಗೆದುಕೊಳ್ಳಲು ಹೇಳಿದ್ದಾರೆ. ಸರ್ಕಾರ ತಪ್ಪು ಮಾಡದಿದ್ದರೆ ರೈತರಿಗೆ ನೀಡಿದ್ದ ನೋಟಿಸ್ ಯಾಕೆ ವಾಪಸ್ ಪಡೆಯುತ್ತಿದ್ದರು?" ಎಂದು ಪ್ರಶ್ನಿಸಿದರು.
"ವಕ್ಫ್ ಸಚಿವ ಜಮೀರ್ ಅವರು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ನೊಟೀಸ್ ನೀಡಲಾಗಿದೆ ಎಂದು ಹೇಳಿದ್ದಾರೆ. ಡಿಸಿಗಳು ಸಚಿವರ ಆದೇಶದ ಮೇರೆಗೆ ನೋಟಿಸ್ ನೀಡಿರುವುದಾಗಿ ಹೇಳಿದ್ದಾರೆ. ಈಗ ಜನ ತಿರುಗಿ ಬೀಳುತ್ತಾರೆ ಎನ್ನುವುದು ಗೊತ್ತಾದ ತಕ್ಷಣ ಯುಟರ್ನ್ ಹೊಡೆಯುತ್ತಿದ್ದಾರೆ. ಮುಡಾದಲ್ಲಿ ಸೈಟ್ ಪಡೆದು ವಾಪಸ್ ಕೊಡುತ್ತಾರೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ ಅದನ್ನು ವಾಪಸ್ ಹಾಕುವುದಾಗಿ ಹೇಳುತ್ತಾರೆ. ಈಗ ವಕ್ಫ್ ವಿಚಾರದಲ್ಲಿ ರೈತರಿಗೆ ನೋಟಿಸ್ ನೀಡಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೋಟಿಸ್ ವಾಪಸ್ ಪಡೆಯುತ್ತಾರೆ. ರಾಜ್ಯ ಸರ್ಕಾರ ನಿರಂತರ ಇದೇ ರೀತಿ ಮಾಡುತ್ತಾ ಬಂದಿದೆ" ಎಂದು ಟೀಕಿಸಿದರು.
ಇದನ್ನೂ ಓದಿ: ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ: ಡಿಸಿಎಂ ಡಿಕೆಶಿ ಕಿಡಿ