ಬೆಂಗಳೂರು: ''ಯಾವುದೇ ಕಾರಣಕ್ಕೂ ಆಪರೇಷನ್ ಕಮಲದ ಮೂಲಕ ಮಹಾರಾಷ್ಟ್ರ ಮಾದರಿ ಕರ್ನಾಟಕದಲ್ಲಿ ಮಾಡಲು ಸಾಧ್ಯವಿಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಶಾಂತಿನಗರದಲ್ಲಿ ಪರಿಷತ್ ಚುನಾವಣೆಯ ಕೈ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ''ಅದು ಅವರ ಭ್ರಮೆ. ಹಗಲು ಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮೂಲಕ ಮಹಾರಾಷ್ಟ್ರ ಮಾದರಿ ಕರ್ನಾಟಕದಲ್ಲಿ ಸರ್ಕಾರ ಪತನ ಮಾಡಲು ಸಾಧ್ಯವಿಲ್ಲ'' ಎಂದು ತಿರುಗೇಟು ನೀಡಿದರು.
''ಏಕೆಂದರೆ ಅವರು ಪಾರ್ಲಿಮೆಂಟ್ ಚುನಾವಣೆಯಲ್ಲಿ ಅವರು ಸೋಲುತ್ತಿದ್ದಾರೆ, ಎನ್ಡಿಎ ಸೋಲುತ್ತಿದೆ. ಅವರು ಈಗಾಗಲೇ ಆಪರೇಷನ್ ಪ್ರಯತ್ನ ಮಾಡಿ ವಿಫಲ ಆಗಿದ್ದಾರೆ. ಇನ್ನೊಂದು ಬಾರಿ ಏಕೆ ಮಾಡುತ್ತಾರೆ? ಕಳೆದ ಒಂದು ವರ್ಷದಿಂದ ಪ್ರಯತ್ನ ಮಾಡಿ ವಿಫಲ ಆಗಿದ್ದಾರೆ. ಮಾಡ್ತಾನೆ ಇದ್ದಾರೆ, ಆದರೂ ವಿಫರಾಗಿದ್ದಾರೆ. ಅಂತಹ ಪ್ರಯತ್ನ ಯಶಸ್ವಿಯಾಗಲ್ಲ. ನಮ್ಮ ಶಾಸಕರು ಯಾರೂ ಮಾರಾಟ ಆಗಲು ತಯಾರಾಗಿಲ್ಲ. ಅವರ ಪ್ರಯತ್ನ ಸಫಲ ಆಗಲ್ಲ'' ಎಂದು ಪುನರುಚ್ಚರಿಸಿದರು.
''ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಗೆಲ್ಲುತ್ತದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು 20 ಸೀಟ್ ಗೆಲ್ಲುತ್ತೇವೆ. ಅವರು ಚುನಾವಣೆಯಲ್ಲಿ ಸೋಲುತ್ತಾರೆ. ಅದಕ್ಕೆ ಅವರು ಹತಾಶರಾಗಿ ಸರ್ಕಾರ ಬೀಳಿಸುವ ಹೇಳಿಕೆ ಕೊಡುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ಸರ್ಕಾರ ಉಳಿಯುವುದು ಅನುಮಾನ: ಇದೇ ವೇಳೆ, ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ''ಮಹಾರಾಷ್ಟ್ರ ಸರ್ಕಾರ ಉಳಿಯುವುದು ಅನುಮಾನ ಇದೆ. ಅಲ್ಲಿ ಶಾಸಕರು ಯುಟರ್ನ್ ಹೊಡೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅಲ್ಲಿ ನಮ್ಮ ಪಕ್ಷದ ಸರ್ಕಾರ ಬರಲಿದೆ'' ಎಂದು ತಿರುಗೇಟು ನೀಡಿದರು.
''ಅಲ್ಲಿ ಮೈತ್ರಿ ಸರ್ಕಾರ ಬರಲಿದೆ. ಎನ್ಸಿಪಿ, ಶಿವಸೇನೆಯ ಶಾಸಕರು ವಾಪಸ್ ಆಗುತ್ತಿದ್ದಾರೆ. ಅದಕ್ಕೆ ಅಲ್ಲಿನ ಸರ್ಕಾರ ಬದಲಾವಣೆ ಆಗಲಿದೆ. ನಮ್ಮ ಸರ್ಕಾರದಲ್ಲಿ ಯಾವುದೇ ಶಿಂಧೆ ಇಲ್ಲ. ಅವರಲ್ಲೇ ಶಿಂಧೆ ಇದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಮಹಾರಾಷ್ಟ್ರ ರೀತಿಯಲ್ಲಿ ಆಪರೇಷನ್ ಆಗುತ್ತದೆ: ಸಿಎಂ ಏಕನಾಥ್ ಶಿಂಧೆ - CM Eknath Shinde