ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಟಿ ರೌಂಡ್ಸ್ ಆರಂಭವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆಗೂಡಿ ರಾಜಕಾಲುವೆ ಪರಿಶೀಲನೆ ನಡೆಸುತ್ತಿದ್ದಾರೆ. ಗೃಹ ಕಚೇರಿ ಕೃಷ್ಣಾದಿಂದ ವೋಲ್ವೋ ಬಸ್ ಮೂಲಕ ಸಚಿವರು, ಅಧಿಕಾರಿಗಳ ಜೊತೆಗೂಡಿ ನಗರ ಪ್ರದಕ್ಷಿಣೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ರಾಜಕಾಲುವೆ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲಿಸಿದರು.
ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದೆ. ಈ ಸಂಬಂಧ ಪರಿಶೀಲನೆ ನಡೆಸಿ, ಪ್ರಸ್ತುತ ಇರುವ ರಾಜಕಾಲುವೆಗೆ ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.
ಪ್ರವಾಹ ನಿಯಂತ್ರಣ ಕಾಮಗಾರಿಗೆ 11.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಸಿಎಂ ಸೂಚಿಸಿದರು. ಈ ರಾಜಕಾಲುವೆಗೆ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಸೂಚಿಸಿದರು.
ಈ ವರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು. ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀರ ಎಂದು ಚೀಫ್ ಎಂಜಿನಿಯರ್ಗೆ ಎಚ್ಚರಿಸಿದ ಸಿಎಂ, ಬಳಿಕ ನಾಯಂಡಹಳ್ಳಿ ಜಂಕ್ಷನ್ನಲ್ಲಿನ ರಾಜಕಾಲುವೆಯನ್ನು ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಸಂಬಂಧಿ ಸಮಸ್ಯೆಗಳು: ಇಂದು ಸಿಎಂ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ - CM Siddaramaiah