ಮಂಗಳೂರು: ತಪ್ಪು ಮಾಡಿದವರನ್ನು ಎಂಎಲ್ಎ ಎಂದು ಬಂಧಿಸದೇ ಬಿಡೋಕೆ ಆಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರೀಶ್ ಪೂಂಜ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಸರ್ಕಾರದಿಂದ ಒತ್ತಡ ಹೆಚ್ಚಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಹರೀಶ್ ಪೂಂಜ ವಿರುದ್ದ ಸೆಕ್ಷನ್ 353 ಅಡಿ ಪ್ರಕರಣ ದಾಖಲಾಗಿದೆ. ಇದು ಜಾಮೀನು ರಹಿತ ಅಪರಾಧವಾಗಿದೆ.
ಈ ಪ್ರಕರಣದಲ್ಲಿ ಏಳು ವರ್ಷ ಜೈಲುವಾಸ ಇದೆ. ಎಂಎಲ್ಎ ಅಂತಾ ಅವರನ್ನು ಬಿಟ್ಟು ಬಿಡೋಕೆ ಆಗುತ್ತಾ? ಎಂಎಲ್ಎ ಆದ್ರೆ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಬಹುದಾ. ಶಾಸಕ ಪೂಂಜ ವಿರುದ್ದ ಎರಡು ಎಫ್ಐಆರ್ ದಾಖಲಾಗಿವೆ ಎಂದು ತಿಳಿಸಿ ಹೊರಟು ಹೋದರು.
ಏನಿದು ಪ್ರಕರಣ?: ಇತ್ತೀಚೆಗೆ ಅಕ್ರಮ ಕಲ್ಲಿನ ಕ್ವಾರಿ ನಡೆಸುತ್ತಿರುವ ಆರೋಪದಡಿ ಬೆಳ್ತಂಗಡಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಇದನ್ನು ಖಂಡಿಸಿ ಯುವ ಮೋರ್ಚಾ ಕಾರ್ಯಕರ್ತರು ಬೆಳ್ತಂಗಡಿ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜ ಠಾಣೆಗೆ ತೆರಳಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸಮೇತ ಪೊಲೀಸರಿಗೆ ಅವಾಜ್ ಹಾಕಿದ್ದರು. ಜಾಸ್ತಿ ಮಾಡಿದ್ರೆ ಜಾಗ್ರತೆ. ಸ್ಟೇಷನ್ ಎಂದರೆ ನಿಮ್ಮ ಅಪ್ಪಂದು ಎಂದು ತಿಳಿದುಕೊಂಡಿದ್ದೀರಾ.. ಹೀಗೆ ಅವಾಜ್ ಹಾಕಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ನಂತರ ಹರೀಶ್ ಪೂಂಜಾ ವಿರುದ್ದ ಸೆಕ್ಷನ್ 353ರ ಅಡಿ ಪ್ರಕರಣ ದಾಖಲಿಸಲಾಗಿತ್ತು.