ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಅವರನ್ನು ಉಚ್ಚಾಟಿಸಿರುವ ಪ್ರಕರಣ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಮತ್ತು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟಿಸಿರುವ ಮತ್ತು ಅಧ್ಯಕ್ಷ ಹುದ್ದೆಗೆ ತಾತ್ಕಾಲಿಕವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನೇಮಿಸಿರುವ ಕ್ರಮ ಪ್ರಶ್ನಿಸಿದ್ದ ಮೂಲ ದಾವೆಯನ್ನು ತಿರಸ್ಕರಿಸಿದ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದು ಕೋರಿ ಸಿ.ಎಂ. ಇಬ್ರಾಹಿಂ ಹೈಕೋರ್ಟ್‌ಗೆ ಮೇಲ್ಮನವಿ (ಆರ್‌ಎಫ್‌ಎ) ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಮೇಲ್ಮನವಿ ಸಂಬಂಧ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿರುವ ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಜೆಡಿಎಸ್ ಪರ ಹಾಜರಾದ ಹಿರಿಯ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮೇಲ್ಮನವಿ ವಿಚಾರಣೆಯನ್ನು ಜೂ.4ಕ್ಕೆ ಮುಂದೂಡಿತು.
ಇದನ್ನೂ ಓದಿ: ರಾಜ್ಯಾದ್ಯಂತ ಪಕ್ಷದಿಂದ ಸದಸ್ಯತ್ವ ನೋಂದಣಿ ಮಾಡಲು ತೀರ್ಮಾನ: ಜಿ.ಟಿ.ದೇವೇಗೌಡ - JDS Core Committee
ಪ್ರಕರಣ ಹಿನ್ನೆಲೆ: ಸಿ.ಎಂ ಇಬ್ರಾಹಿಂ ಅವರನ್ನು 2022ರ ಆ.3ರಂದು ಜೆಡಿಎಸ್ ಅಧ್ಯಕ್ಷರಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿತ್ತು. ನಂತರ ಸಕಾರಣವಿಲ್ಲದೇ ತಮ್ಮನ್ನು 2023ರ ಅ.19ರಂದು ಪಕ್ಷ ಹಾಗೂ ಅಧ್ಯಕ್ಷ ಹುದ್ದೆಯಿಂದ ಉಚ್ಚಾಟನೆ ಮಾಡಲಾಗಿದೆ. ಉಚ್ಚಾಟನೆಗೂ ಮುನ್ನ ತಮ್ಮ ಅಹವಾಲು ಆಲಿಸಿಲ್ಲ. ಆದ್ದರಿಂದ ಉಚ್ಚಾಟನೆ ಆದೇಶ ರದ್ದುಪಡಿಸಬೇಕು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಕೋರಿ ಸಿಟಿ ಸಿವಿಲ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಜಾಗೊಳಿಸಿ 2024ರ ಮಾ.23ರಂದು ನಗರದ 26ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಇಬ್ರಾಹಿಂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜೊತೆಗೆ, ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಮರ್ಡರ್ ಕೇಸ್: ಗಾಯಗೊಂಡಿದ್ದ ಯಾಸೀನ್ ಖುರೇಷಿ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ - Shivamogga Murder case