ಬೆಂಗಳೂರು/ದೆಹಲಿ: ಹೈಕಮಾಂಡ್ಗೆ ಧನ್ಯವಾದ ಹೇಳಿದ ಸಿಎಂ ಸಿದ್ದರಾಮಯ್ಯ, ಈ ನೆಲದ ಕಾನೂನಿನ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಹುನ್ನಾರದಿಂದ ರಾಜ್ಯಪಾಲರು ಪ್ರಸಿಕ್ಯೂಶನ್ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ನಿರ್ಧಾರಕ್ಕೆ ಕೋರ್ಟ್ನಲ್ಲಿ ಉತ್ತರ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.
ಹೈಕಮಾಂಡ್ ರಾಜ್ಯ ಸರ್ಕಾರದ ಜೊತೆಗಿದೆ: ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ನಿಮ್ಮ ಜೊತೆಗಿದ್ದೇವೆ ಧೈರ್ಯದಿಂದ ಹೋರಾಟ ಮಾಡಿ, ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ನಾಯಕರು ನಮಗೆ ಅಭಯ ಕೊಟ್ಟಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಜೊತೆಯಾಗಿ ನಿಂತಿವೆ. ಕರ್ನಾಟಕದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಿರುಕುಳ ನೀಡುತ್ತಿರುವ ಬಗ್ಗೆ ನಮ್ಮ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರೂ ಸಹ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ದೊಡ್ಡ ರಾಜ್ಯ ಕರ್ನಾಟಕ. ಇದನ್ನು ಅಭದ್ರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಕೇವಲ ಮುಖ್ಯಮಂತ್ರಿಗಳನ್ನ ಮಾತ್ರ ಗುರಿ ಮಾಡುತ್ತಿಲ್ಲ. ಬಡವರಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಗುರಿ ಮಾಡುತ್ತಿದ್ದಾರೆ. ನಮಗೆ ಕಾನೂನಿನ ಮೇಲೆ ಗೌರವವಿದೆ. ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ನೀಡಿರುವುದು ಅಸಂವಿಧಾನಿಕ. ಇದನ್ನು ರಾಜ್ಯಪಾಲರೇ ಮನದಟ್ಟು ಮಾಡಿಕೊಂಡು ವಾಪಾಸ್ ಪಡೆಯುವ ಕಾಲ ಬರಲಿದೆ ಎಂದು ಪ್ರತಿಕ್ರಿಯೆ ನೀಡಿದರು.
ಎಲ್ಲಾ ಆಯ್ಕೆಗಳು ಮುಕ್ತವಾಗಿವೆ: ಇದೇ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ಸರ್ಕಾರದ ಸಾಧನೆ ಸಹಿಸಲು ಬಿಜೆಪಿ ನಾಯಕರಿಗೆ ಆಗುತ್ತಿಲ್ಲ. ಗ್ಯಾರೆಂಟಿ ಯೋಜನೆಗಳು ಬಿಜೆಪಿಗರಿಗೆ ನಿದ್ದೆಗೆಡಿಸಿವೆ. ಉತ್ತಮ ಆಡಳಿತದ ಸರ್ಕಾರಕ್ಕೆ ರಾಜ್ಯಪಾಲರ ಮೂಲಕ ತೊಂದರೆ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಅಸ್ಥಿರ ಮಾಡಲು ಹೊರಟಿದೆ. ಈ ಸಂಬಂಧ ಕಾನೂನು ಹೋರಾಟ ಮಾಡಲಾಗುವುದು. ರಾಷ್ಟ್ರಪತಿ ಮುಂದೆ ಕೈ ಶಾಸಕರ ಪರೇಡ್ ಸೇರಿ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ತಿಳಿಸಿದರು.
ಶುಕ್ರವಾರ ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ ಅವರನ್ನು ಭೇಟಿಯಾಗಿ ಕೆಲಕಾಲ ಚರ್ಚೆ ನಡೆಸಿದರು.
ಇದನ್ನೂ ಓದಿ: ಕೆಐಎಡಿಬಿ ಸಿಎ ನಿವೇಶನ ಹರಾಜು ಮಾಡುವ ಪದ್ಧತಿ ಇಲ್ಲ, ಕಾನೂನು ಪ್ರಕಾರ ಹಂಚಿಕೆ:ಎಂ.ಬಿ.ಪಾಟೀಲ್ - Minister M B Patil