ಬೆಳಗಾವಿ: ಹಬ್ಬದ ಮೆರವಣಿಗೆಗೆ ಅಳವಡಿಸಿದ್ದ ವಿದ್ಯುತ್ ದೀಪಕ್ಕೆ ಹಾನಿ ಮಾಡಿದ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ರುಕ್ಮಿಣಿ ನಗರದಲ್ಲಿ ನಡೆದಿದೆ. ಮಹ್ಮದ್ ಕೈಫ್, ತನ್ವಿರ್, ಶಾಹಿಲ್ ಬಂಡಾರಿ, ಅಬ್ಜಾನ್ ಹುಂಡೇಕರ್ ಎಂಬವರ ಹೊಟ್ಟೆ, ಬೆನ್ನು ಹಾಗು ಎದೆಗೆ ಗಾಯಗಳಾಗಿವೆ.
ಉಜ್ವಲನಗರದ ಸಮೀರ ಎಂಬಾತ ಸೇರಿದಂತೆ 8ಕ್ಕೂ ಅಧಿಕ ಜನರ ತಂಡದ ವಿರುದ್ಧ ತಲ್ವಾರ್ನಿಂದ ಹಲ್ಲೆ ಮಾಡಿದ ಆರೋಪವಿದೆ. ಸಮೀರ್ ನೇತೃತ್ವದ ಗುಂಪು ಅಳವಡಿಸಿದ್ದ ವಿದ್ಯುತ್ ದೀಪಗಳಿಗೆ ಬೈಕ್‌ನಿಂದ ಗುದ್ದಿಸಿ ಮಹ್ಮದ್ ಕೈಫ್ ಹಾಗೂ ಆತನ ಸ್ನೇಹಿತರು ಹಾನಿಗೊಳಿಸಿದ್ದರು. ಹಾನಿಯಾದ ವಿದ್ಯುತ್ ದೀಪಗಳಿಗೆ ಪರಿಹಾರ ನೀಡುವಂತೆ ಸಮೀರ್ ತಂಡ ಬೇಡಿಕೆ ಇಟ್ಟಿದೆ. ಆಗ ಪರಸ್ಪರ ವಾಗ್ವಾದವಾಗಿ ಸಮೀರ್ ನೇತೃತ್ವದ ತಂಡ ತಲ್ವಾರ್ನಿಂದ ಮಹ್ಮದ್ ಕೈಫ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ಮಾಡಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆ ಎದುರು ಗಾಯಾಳುಗಳ ಸ್ನೇಹಿತರು, ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅವರನ್ನು ಪೊಲೀಸರು ಅಲ್ಲಿಂದ ಚದುರಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸತತ 32 ಗಂಟೆ ನಿಮಜ್ಜನ ಮೆರವಣಿಗೆ: ಹೊಸ ದಾಖಲೆ ಬರೆದ ಬೆಳಗಾವಿ ಗಣೇಶೋತ್ಸವ - Ganeshotsava Procession