ಬೆಂಗಳೂರು: ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚನೆ ಆರೋಪ ಸಂಬಂಧ ಇಡ್ಲಿಗುರು ಹೋಟೆಲ್ ಸಂಸ್ಥಾಪಕ ಕಾರ್ತಿಕ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಪೊಲೀಸರು ತಮ್ಮನ್ನ ಬಂಧಿಸಿಲ್ಲ ಎಂದು ಹೇಳಿದ್ದಾರೆ. ಬದಲಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಟ್ಟಿದ್ದರು ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.
ಹೋಟೆಲ್ಗೆ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ತಮಗೆ ಐದು ಲಕ್ಷ ಹಣ ವಂಚಿಸಿದ್ದಾರೆ ಎಂದು ಆರೋಪಿಸಿ ಚೇತನ್ ಎಂಬುವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸತ್ಯಾಸತ್ಯತೆ ಅರಿಯಲು ಸಿಆರ್ಪಿಸಿ 41 (ಎ) ನಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಅದರಂತೆ ಫೆಬ್ರುವರಿ 15 ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ. ಮಾಧ್ಯಮಗಳಲ್ಲಿ ಬಂಧಿತರಾಗಿರುವ ಬಗ್ಗೆ ಸುದ್ದಿ ಬಂದಿದೆ. ಹೀಗಾಗಿ ನಡೆದ ವಿಷಯದ ಬಗ್ಗೆ ತಿಳಿಸಿದ್ದೇನೆ ಎಂದು ಕಾರ್ತಿಕ್ ಶೆಟ್ಟಿ ಹೇಳಿದ್ದಾರೆ.
''ಮುಂಬೈನಲ್ಲಿ ಇಡ್ಲಿಗುರು ಹೋಟೆಲ್ನ ವಿವಿಧ ಶಾಖೆಗಳಿವೆ. ವ್ಯವಹಾರಿಕ ದೃಷ್ಟಿಯಿಂದ ಆಗಾಗ್ಗೆ ಮುಂಬೈಗೆ ಹೋಗಿ ಬರುತ್ತೇನೆ. ಅದೇ ರೀತಿ ಫೆ.14ರಂದು ಮುಂಬೈನಲ್ಲಿದ್ದೆ. ಚೇತನ್ ಎಂಬುವರು ದೂರು ನೀಡಿರುವ ಬಗ್ಗೆ ಗೊತ್ತಿರಲಿಲ್ಲ. ಬಳಿಕ ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಮಾತ್ರವೇ ವಿಷಯ ಗೊತ್ತಾಯಿತು. ನಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದೇನೆ'' ಎಂದರು.
''ನನ್ನ ಮೇಲೆ ಬಂದಿರುವ ಆರೋಪ ಸುಳ್ಳಾಗಿದೆ. ಚೇತನ್ ಎಂಬಾತ ಹೋಟೆಲ್ ಫ್ರಾಂಚೈಸಿ ಪಡೆದುಕೊಂಡಿದ್ದ. ಷರತ್ತಿನಂತೆ 3 ಲಕ್ಷ ಹಣ ಪಡೆದಿದ್ದು ನಿಜ. ವಾಪಸ್ ಕೇಳುವಾಗ 5 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಆತ ದೂರು ಕೊಡುವಾಗಲು ಸ್ಪಷ್ಟವಾಗಿ ಹೇಳಿದ್ದರೂ ಲೀಗಲ್ ನೋಟಿಸ್ ಕಳುಹಿಸಿದ್ದ. ಇದಕ್ಕೆ ಸಮಜಾಯಿಷಿ ನೀಡಿದ್ದೆವು. ಆದರೂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಒಪ್ಪಂದದಂತೆ 3 ಲಕ್ಷ ಹಣ ನೀಡಲು ಸಿದ್ಧನಿದ್ದೇನೆ ಎಂದ ಕಾರ್ತಿಕ್, ಬೆಂಗಳೂರಿನಲ್ಲಿ 55 ಶಾಖೆಗಳಿದ್ದು, 3 ಲಕ್ಷ ರೂ.ಗಾಗಿ ಎಸ್ಕೇಪ್ ಆಗಲು ಸಾಧ್ಯವೇ ಎಂದು'' ಪ್ರಶ್ನಿಸಿದರು.
ಚೇತನ್ ನೀಡಿದ ದೂರಿನಲ್ಲಿ ಏನಿತ್ತು? ಆರಂಭದಲ್ಲಿ ಫ್ರಾಂಚೈಸಿ ನೀಡುವುದಾಗಿ ತಮ್ಮನ್ನು ನಂಬಿಸಿದ್ದ ಕಾರ್ತಿಕ್ ಶೆಟ್ಟಿ, ಪ್ರತಿಯಾಗಿ ಠೇವಣಿ ರೂಪದಲ್ಲಿ ಮೂರು ಲಕ್ಷ ರೂ. ಪಡೆದಿದ್ದರು. ಹೋಟೆಲ್ ಆರಂಭಿಸುವುದಕ್ಕಾಗಿ ತಮ್ಮ ಮನೆಯ ನೆಲಮಹಡಿಯಲ್ಲಿದ್ದ ಬಾಡಿಗೆ ಆದಾಯ ಬರುತ್ತಿದ್ದ ಜಾಗವನ್ನ ತೆರವುಗೊಳಿಸಿದ್ದರು. ಬಳಿಕ ಅಲ್ಲಿ ಫುಡ್ಕಾರ್ಟ್ ತಂದು ನಿಲ್ಲಿಸಿದ್ದರು. ಸ್ವಲ್ಪ ದಿನಗಳ ಬಳಿಕ ಅಂದುಕೊಂಡಂತೆ ವ್ಯಾಪಾರ ಆಗುತ್ತಿಲ್ಲ, ಬೇರೆಡೆ ವ್ಯಾಪಾರ ಮಾಡೋಣ ಕಮಿಷನ್ ನೀಡುತ್ತೇವೆ ಎಂದಿದ್ದರು. ಆದರೆ ಯಾವುದೇ ಕಮಿಷನ್ ನೀಡದೆ, ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡದೆ ವಂಚಿಸಿದ್ದಾರೆ'' ಎಂದು ಚೇತನ್ ದೂರು ನೀಡಿದ್ದರು.
ಇದನ್ನೂ ಓದಿ: ರಾಮನಗರ: ಮಹಿಳಾ ಕಾನ್ಸ್ಟೇಬಲ್ ಆತ್ಮಹತ್ಯೆ