ಬೆಂಗಳೂರು: ಬಡವರು, ಸಣ್ಣ ಮತ್ತು ಅತಿಸಣ್ಣ ರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೀಘ್ರ ನ್ಯಾಯದಾನ ನೀಡುವ 'ಸಿವಿಲ್ ಪ್ರಕ್ರಿಯಾ ಸಂಹಿತೆ'ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಐತಿಹಾಸಿಕ ನ್ಯಾಯದಾನ ವ್ಯವಸ್ಥೆಯ ಕಾಯ್ದೆ ಜಾರಿಗೆ ಬರಲಿದೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದ ಈ ವಿಧೇಯಕ ರಾಷ್ಟ್ರಪತಿಗಳ ಅಂಕಿತ ವ್ಯಾಪ್ತಿಯನ್ನು ಹೊಂದಿತ್ತು. ಅಂಕಿತ ದೊರಕಿರುವುದರಿಂದ ಮಸೂದೆ ಈಗ ಕಾಯ್ದೆಯಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ವಿಧಾನಸಭೆಗೆ ತಿಳಿಸಿದರು.
ರೈತರು, ಬಡವರು, ಸಣ್ಣ ರೈತ ವರ್ಗದವರು ಸುದೀರ್ಘ ಕಾಲದವರೆಗೆ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ನಿರ್ವಹಿಸಲು ಆರ್ಥಿಕವಾಗಿ ಅಸಾಧ್ಯ. ಇಂಥವರ ಪ್ರಕರಣಗಳನ್ನು ಆರು ತಿಂಗಳೊಳಗೆ ಆಲಿಸಿ, ವಿಚಾರಣೆ ಮಾಡಿ ಇತ್ಯರ್ಥ ಮಾಡುವುದಕ್ಕೆ ಹೊಸ ಕಾಯ್ದೆ ಅವಕಾಶ ನೀಡಲಿದೆ ಎಂದರು.
ಎಲ್ಲ ಮೂಲಗಳಿಂದ ವಾರ್ಷಿಕವಾಗಿ 50 ಸಾವಿರ ರೂ. ಆದಾಯ ದಾಟದೇ ಇರುವವರು ಈ ನ್ಯಾಯದಾನ ವ್ಯವಸ್ಥೆಯ ಪ್ರಯೋಜನ ಪಡೆಯಲಿದ್ದಾರೆ. ಹಣ ಭರಿಸುವ ಸಾಮರ್ಥ್ಯ ಇಲ್ಲದವರು ಕೋರ್ಟ್‌ಗಳಲ್ಲಿ ದೀರ್ಘಾವಧಿ ಹೋರಾಡುವುದು ಮತ್ತು ಕಷ್ಟಪಡುವುದು ತಪ್ಪುತ್ತದೆ ಎಂದು ಸಚಿವರು ಸದನಕ್ಕೆ ವಿವರಿಸಿದರು.
ಇದನ್ನೂಓದಿ: ಹಿಂದಿನ ಸರ್ಕಾರದ್ದು ಬರೀ ಲೂಟಿ, ನಮ್ಮದು ರಾಜ್ಯದ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ