ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಮನೆಗೆ ಸಿಐಡಿ ಅಧಿಕಾರಿಗಳ ತಂಡ ಇಂದು ಸಂಜೆ ಭೇಟಿ ನೀಡಿದೆ. ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ಎರಡನೇ ತಿರುವಿನಲ್ಲಿ ಇರುವ ಚಂದ್ರಶೇಖರ್ ಅವರ ಮನೆಗೆ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ಅವರ ನೇತೃತ್ವದಲ್ಲಿ ಒಟ್ಟು 6 ಜನರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿಐಡಿ ತಂಡ ಸುಮಾರು 50 ನಿಮಿಷಗಳ ಕಾಲ ಮನೆಯಲ್ಲಿ ಶೋಧ ನಡೆಸಿದೆ.
ಇದೇ ವೇಳೆ, ಸಿಐಡಿ ತಂಡ ಮೃತ ಚಂದ್ರಶೇಖರನ್ ಅವರ ಪತ್ನಿ ಕವಿತಾ, ಮಕ್ಕಳಾದ ಚಿರತ್ ಹಾಗೂ ಚಿನ್ಮಯ್ ಹಾಗೂ ಕುಟುಂಬದ ಇತರ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ. ನಂತರ ಚಂದ್ರಶೇಖರನ್ ಬಳಸುತ್ತಿದ್ದ ಲ್ಯಾಪ್ಟಾಪ್ ಪರಿಶೀಲನೆ ನಡೆಸಿದ್ದಾರೆ. ನಂತರ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ಸಂಬಂಧಪಟ್ಟಂತಹ ಪೆನ್ಡ್ರೈವ್ ಒಂದನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಉಳಿದಂತೆ ವಿಚಾರಣೆಯನ್ನು ಸಿಐಡಿ ತಂಡ ನಾಳೆ ನಡೆಸುವ ಸಾಧ್ಯತೆಗಳಿವೆ ಎಂಬುದು ತಿಳಿದು ಬಂದಿದೆ.
ಇದೇ ವೇಳೆ, ಸಿಐಡಿ ತಂಡ ಆತ್ಮಹತ್ಯೆ ದೂರು ದಾಖಲಾಗಿದ್ದ ವಿನೋಬನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 85 ಕೋಟಿ ರೂ. ಹಣ ಬೇರೆ ಬೇರೆ ಖಾತೆಗೆ ವರ್ಗಾವಣೆ ಆಗಿದೆ. ಇದರಲ್ಲಿ ನಿಗಮದ ಎಂ. ಡಿ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ ದುರುಗಣ್ಣನವರ್ ಹಾಗೂ ಯುಎನ್ಐ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕರಾದ ರುಚಿಸ್ಮಿತಾ ಅವರ ಹೆಸರನ್ನು ಬರೆದಿಟ್ಟು ನಾನು ಪ್ರಾಮಾಣಿಕ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದರು.
ಇದನ್ನೂ ಓದಿ : ನನ್ನ ಪತಿ ಪ್ರಾಮಾಣಿಕರು, ಅವರ ಸಾವಿಗೆ ನ್ಯಾಯ ಸಿಗಬೇಕು: ಚಂದ್ರಶೇಖರನ್ ಪತ್ನಿ ಆಗ್ರಹ - Chandrashekharan Suicide