ಬೆಂಗಳೂರು: ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಒಂದನೇ ತ್ವರಿತಗತಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅರುಣ್, ರುದ್ರೇಶ್ ಹಾಗೂ ಮರಿಸ್ವಾಮಿ ಅವರನ್ನು ಆರೋಪಿತರನ್ನಾಗಿ ಮಾಡಿದ್ದಾರೆ. ಸುಮಾರು 750 ಪುಟಗಳಿರುವ ಚಾರ್ಜ್‌ಶೀಟ್ ಇದಾಗಿದ್ದು, 75 ಮಂದಿಯನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್‌ವೈ ವಿರುದ್ಧ ಸಾಕ್ಷ್ಯ ನಾಶಪಡಿಸಿದ ಆರೋಪ: ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದ್ದ ಸಂತ್ರಸ್ತೆಯ ತಾಯಿ ಮಾಡಿಕೊಂಡಿದ್ದ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು. ಯಡಿಯೂರಪ್ಪ ಸೂಚನೆ ಮೇರೆಗೆ ಇತರ ಆರೋಪಿಗಳಾದ ಅರುಣ್, ರುದ್ರೇಶ್, ಮರಿಸ್ವಾಾಮಿ, ಸಂತ್ರಸ್ತೆೆ ತಾಯಿಯನ್ನು ಪತ್ತೆೆ ಹಚ್ಚಿ ಬಿಎಸ್‌ವೈ ಮನೆಗೆ ಕರೆತಂದಿದ್ದರು. ಬಳಿಕ ಫೇಸ್‌ಬುಕ್‌ನಲ್ಲಿ ಆಕೆ ಪೋಸ್ಟ್ ಮಾಡಿದ್ದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಅಲ್ಲದೆ, ಆಕೆಯ ಫೋನ್‌ನಲ್ಲಿದ್ದ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದರು. ಆ ನಂತರ ಆಕೆಗೆ ರುದ್ರೇಶ್ 2 ಲಕ್ಷ ರೂ. ಕೊಟ್ಟು ಈ ವಿಚಾರ ಹೊರಗಡೆ ಬಾಯಿಬಿಡದಂತೆ ಹೇಳಿ ಕಳುಹಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾಾರೆ. ಈ ಮೂವರ ವಿರುದ್ಧ ಸಾಕ್ಷ್ಯ ನಾಶ ಮತ್ತು ಅರೋಪ ಮರೆ ಮಾಚಲು ಹಣದ ಆಮಿಷವೊಡ್ಡಿಿದ್ದ ಆರೋಪದಡಿ ಕೇಸ್ ದಾಖಲಿಸಲಾಗಿದೆ.
ಮಹಿಳೆಯೊಬ್ಬರು ಕಳೆದ ಫೆಬ್ರವರಿ 2ರಂದು ತಮ್ಮ ಪುತ್ರಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವ ವಿಚಾರದಲ್ಲಿ ಸಹಾಯ ಕೋರಿ ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದರು. ಆ ವೇಳೆ ಅಪ್ರಾಪ್ತೆಯನ್ನು ಕೋಣೆಗೆ ಕರೆದೊಯ್ದು ಬಾಗಿಲು ಹಾಕಿದ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಳಿಕ ಬಾಲಕಿ ಗಾಬರಿಗೊಂಡು ಬಾಗಿಲು ತೆರೆಯುವಂತೆ ಹೇಳಿದಾಗ, ತಮ್ಮ ಜೇಬಿನಲ್ಲಿದ್ದ ಹಣ ಕೊಟ್ಟಿದ್ದಾರೆ. ಆ ನಂತರ ಕೋಣೆಯಿಂದ ಹೊರಗಡೆ ಬಂದಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 354(ಎ)ಲೈಂಗಿಕ ದೌರ್ಜನ್ಯ, ಐಪಿಸಿ ಸೆಕ್ಷನ್ 204- ಸಾಕ್ಷ್ಯ ನಾಶಪಡಿಸಿರುವುದು, ಐಪಿಸಿ ಸೆಕ್ಷನ್ 214 ಆರೋಪ ಮರೆ ಮಾಚಲು ಹಣದ ಆಮಿಷವೊಡ್ಡಿದ ಆರೋಪದಡಿ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂಬುದು ಆರೋಪಪಟ್ಟಿಯಲ್ಲಿದೆ.
ಫೆಬ್ರವರಿ 2ರಂದು ಯಡಿಯೂರಪ್ಪ ಅವರ ಮನೆಗೆ ತಾಯಿ ಜೊತೆ ತೆರಳಿದ್ದ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಹಿನ್ನೆಲೆಯಲ್ಲಿ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬಿಎಸ್‌ವೈ ವಿರುದ್ಧ ಪೋಕ್ಸೋ ಕೇಸ್ನಡಿ ಎಫ್ಐಆರ್ ದಾಖಲಾಗಿತ್ತು. ಮಾರ್ಚ್ 14ರಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು. ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪನವರಿಗೆ ಸಿಐಡಿ ನೋಟಿಸ್ ನೀಡಿತ್ತು.
ಏಪ್ರಿಲ್ 12ರಂದು ಬಿಎಸ್‌ವೈ ವಿಚಾರಣೆಗೆ ಹಾಜರಾಗಿ ಧ್ವನಿ ಮಾದರಿ ನೀಡಿದ್ದರು. ಈ ಮಧ್ಯೆ ಸಂತ್ರಸ್ತೆಯ ತಾಯಿ ಸಾವಿನ ಬಳಿಕ ಸಂತ್ರಸ್ತೆ ಪರವಾಗಿ ಸಂಬಂಧಿಯೊಬ್ಬರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ಜೂನ್ 12ರಂದು ಬಿಎಸ್ವೈಗೆ ಸಿಐಡಿ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಜೂನ್ 12ರಂದು ಅರೆಸ್ಟ್ ವಾರೆಂಟ್ ಕೋರಿ ಸಿಐಡಿಯಿಂದ ಅರ್ಜಿ ಸಲ್ಲಿಕೆಯಾಗಿತ್ತು. ಬಳಿಕ ಹೈಕೋರ್ಟ್ ಬಿಎಸ್‌ವೈ ಅವರನ್ನು ಬಂಧಿಸದಂತೆ ಸಿಐಡಿಗೆ ನಿರ್ದೇಶಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದರಂತೆ ಯಡಿಯೂರಪ್ಪ ಸಿಐಡಿ ಮುಂದೆ ಹಾಜರಾಗಿದ್ದರು.
ಬಿಎಸ್‌ವೈ ಪ್ರತಿಕ್ರಿಯೆ: ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪದ ಕುರಿತು ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ’’ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕಾನೂನಿನ ರೀತಿ ಎದುರಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಇದೆ ಎನ್ನುವ ಆರೋಪವನ್ನು ನಾನು ಮಾಡಲ್ಲ. ಒಂದೂವರೆ ತಿಂಗಳ ಹಿಂದೆ ತಾಯಿ ಮಗಳು ಕಣ್ಣೀರು ಹಾಕುವುದನ್ನುನೋಡಿ ಒಮ್ಮೆ ಒಳಗಡೆ ಕರೆಸಿ ಕೂರಿಸಿ ಸಮಸ್ಯೆಯನ್ನ ಆಲಿಸಿದೆ. ಅನ್ಯಾಯ ಆಗಿದೆ ಎಂದು ನೋವು ತೋಡಿಕೊಂಡಿದ್ದರಿಂದ ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ನ್ಯಾಯ ಒದಗಿಸಿ ಕೊಡಿ ಎಂದು ಕೋರಿದ್ದೆ. ಆ ಬಳಿಕ ಈ ಮಹಿಳೆ ಇದನ್ನ ಬೇರೆ ರೀತಿ ಮಾಡಿ ದೂರು ದಾಖಲಿಸಲಾಗಿದೆ. ಉಪಕಾರ ಮಾಡಲು ಹೋದರೆ ಹೇಗಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ’’ ಎಂದು ಹೇಳಿದ್ದರು.
ಇದನ್ನೂ ಓದಿ: ಪೋಕ್ಸೋ ಪ್ರಕರಣ: ಸಿಐಡಿ ವಿಚಾರಣೆಗೆ ಹಾಜರಾದ ಮಾಜಿ ಸಿಎಂ ಯಡಿಯೂರಪ್ಪ - Yediyurappa appear before CID