ಪುತ್ತೂರು (ದಕ್ಷಿಣ ಕನ್ನಡ) : ಆ. 19ಕ್ಕೆ ಮಂಗಳೂರಿನಲ್ಲಿ ಕೆಪಿಸಿಸಿಯ ನಿರ್ದೇಶನದಂತೆ ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಪ್ರತಿಭಟನೆಯಲ್ಲಿ 'ಸಂವಿಧಾನ ವಿರೋಧಿಯಾಗಿ ನಡೆದುಕೊಂಡ ಕರ್ನಾಟಕದ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶದ ಅಧ್ಯಕ್ಷರು ರಾತ್ರೋರಾತ್ರಿ ಓಡಿಹೋದ ಪರಿಸ್ಥಿತಿ ಗವರ್ನರ್ ಆಫೀಸ್ಗೆ ಬರುತ್ತದೆ...' ಎಂದು ಎಂಎಲ್ಸಿ ಐವನ್ ಡಿಸೋಜ ಅವರು ಭಾಷಣದಲ್ಲಿ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಹೇಳಿಕೆಯನ್ನು ತಿರುಚಿ ಅವರ ಮಾನಹಾನಿಗೆ ಪ್ರಯತ್ನಿಸಿ, ಅವರ ಅನುಪಸ್ಥಿತಿಯಲ್ಲಿ ಅವರ ಮನೆಗೆ ರಾತ್ರಿ ಕಲ್ಲುತೂರಾಡಿ ರಾಜಕೀಯ ಹಿಂಸಾರಕ್ಕೆ ಯತ್ನಿಸಿದ ದ. ಕ ಜಿಲ್ಲಾ ಬಿಜೆಪಿಯ ಗೂಂಡಾ ಸಂಸ್ಕೃತಿಯನ್ನು ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ತೀವ್ರವಾಗಿ ಖಂಡಿಸುತ್ತದೆ ಎಂದರು.
ಐವನ್ ಡಿಸೋಜ ಅವರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಏಕೈಕ ವಿಧಾನಪರಿಷತ್ ಸದಸ್ಯರಾಗಿ ಜಾತ್ಯತೀತತೆ ಸಮುದಾಯದ ಧ್ವನಿಯನ್ನು ವಿಧಾನಪರಿಷತ್‌ನಲ್ಲಿ ಎತ್ತುತ್ತಿದ್ದಾರೆ. ಇಂತಹ ಜನಪ್ರತಿನಿಧಿಯನ್ನು ವಿನಾ ಕಾರಣ ನಿಂದಿಸಿ ರಾತ್ರಿ ಹೊತ್ತು ಕಲ್ಲುತೂರಾಟ ನಡೆಸಿರುವುದು ಭಯೋತ್ಪಾದನೆಗೆ ಸಮಾನವಾದ ಕೃತ್ಯವಾಗಿದೆ ಎಂದು ಕಿಡಿಕಾರಿದರು.
ಅವರು ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡರೆ ಜನರ ಆಕ್ರೋಶವನ್ನು ಎದುರಿಸಬೇಕಾದಿತು ಎಂಬ ಅರ್ಥದಲ್ಲಿ ಭಾಷಣ ಮಾಡಿದ್ದರು. ಆದರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಪೊಲೀಸ್ ಸ್ಟೇಷನ್‌ಗೆ ನುಗ್ಗಿ ಅಲ್ಲಿರುವ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ ಎಂದು ದೂರಿದರು.
ಇನ್ನೊಂದು ಪ್ರಕರಣದಲ್ಲಿ ಅರಣ್ಯ ಒತ್ತುವರಿಯನ್ನು ತೆರವು ಮಾಡಲು ಹೋದಂತಹ ಪುತ್ತೂರಿನ ಅರಣ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅದೇ ರೀತಿ ಮೊನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪಾರ್ಲಿಮೆಂಟ್‌ನಲ್ಲಿ ಕೆನ್ನೆಗೆ ಹೊಡೆಯಬೇಕೆಂದು ಭರತ್ ಶೆಟ್ಟಿಯವರು ಹೇಳಿದ್ದರು. ನಮ್ಮ ಮಾಜಿ ಸಂಸದರು ಜಿಲ್ಲೆಗೆ ಬೆಂಕಿ ಹಚ್ಚುತ್ತಾರೆ ಎಂದು ಹೇಳಿದ್ದರು. ಇವೆಲ್ಲ ಬಿಜೆಪಿಗೆ ಮರೆತು ಹೋಗಿದೆಯಾ? ಎಂದು ಪ್ರಶ್ನಿಸಿದ ಅವರು, ಇಂತಹ ಪಕ್ಷವನ್ನು ಪ್ರತಿನಿಧಿಸುವ ನಾಯಕರು ಐವನ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಸವಾಲು ಹಾಕಿದರು.
ಕಲ್ಲುತೂರಾಟ ಅಕ್ಷಮ್ಯ ಅಪರಾಧ: ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಬೇಧಗಳು ಮಾತುಗಳಿಗೆ ಸೀಮಿತವಾಗಿರಬೇಕು ಹೊರತು, ವ್ಯಕ್ತಿಗೆ ಮತ್ತು ಆಸ್ತಿಗೆ ಹಾನಿ ಮಾಡುವ ಮಟ್ಟಕ್ಕೆ ಹೋಗಬಾರದು. ಐವಾನ್ ಡಿಸೋಜ ಅವರ ಮನೆಗೆ ಕಲ್ಲುತೂರಾಟ ಮಾಡಿರುವುದು ಅಕ್ಷಮ್ಯ ಅಪರಾಧ. ಯಾವುದೇ ರಾಜಕೀಯ ಟೀಕೆಗಳು ಮಾತಿನ ಮೂಲಕ ಪ್ರತಿಕ್ರಿಯೆ ಕೊಡಬೇಕೇ ಹೊರತು, ಕಲ್ಲುತೂರಾಟ ಮಾಡುವುದಲ್ಲ. ಸಮಾಜದ ಶಾಂತಿ ನೆಮ್ಮದಿಗೆ ಅಪಾಯ ಆಗಬಾರದು. ಕಲ್ಲುತೂರಾಟ ಮಾಡಿದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ, ಇದರ ಹಿಂದೆ ಯಾವ ಶಕ್ತಿ ಕೆಲಸ ಮಾಡಿದೆ ಎಂಬುದನ್ನ ಸಾರ್ವಜನಿಕವಾಗಿ ತಿಳಿಸುವ ಅವಶ್ಯಕತೆ ಇದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಇದರ ಗೌರವಾಧ್ಯಕ್ಷ ವಲೇರಿಯನ್ ಡಯಾಸ್, ಉಪಾಧ್ಯಕ್ಷ ಕ್ಯಾನ್ಯೂಟ್ ಮಸ್ಕರೇನಸ್, ಜೊತೆ ಕಾರ್ಯದರ್ಶಿ ನಿವೃತ್ತ ಪೊಲೀಸ್ ಅಧಿಕಾರಿ ಜೋಕಿಂ ಲೂಯಿಸ್, ಕೋಶಾಧಿಕಾರಿ ವಾಲ್ಟರ್ ಸ್ವಿಕ್ವೆರಾ ಉಪಸ್ಥಿತರಿದ್ದರು.
ಇದನ್ನೂ ಓದಿ : ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ದೂರು - Complaint Against Ivan