ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸೇರಿದಂತೆ ರಾಜಕೀಯ ನಾಯಕರು, ಸಿನಿಮಾ ತಾರೆಯರು, ಯುವ ಮತದಾರರು, ವಯೋವೃದ್ಧರು ಮತಗಕಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಅದರಂತೆ ಮತದಾನ ಮಾಡಲೆಂದೇ ಫಿಲಿಪ್ಪಿನ್ಸ್ ನಿಂದ ಆಗಮಿಸಿದ ವಿದ್ಯಾರ್ಥಿನಿ ಲಿಖಿತಾ ಎಂಬುವರು ಮತ ಚಲಾಯಿಸಿ ಗಮನ ಸೆಳೆದರು.
ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಪುತ್ರಿಯಾಗಿರುವ ಲಿಖಿತಾ ಫಿಲಿಪ್ಪಿನ್ಸ್ ನಲ್ಲಿ ಮೆಡಿಕಲ್ ವಿದ್ಯಭ್ಯಾಸ ಮಾಡುತ್ತಿದ್ದು, ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮತಗಟ್ಟೆ 225ಸಂಖ್ಯೆ ರಲ್ಲಿ ಮತ ಚಲಾವಣೆ ಮಾಡಿ ಗಮನ ಸೆಳೆದರು.
ಮತದಾನ ಮಾಡಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಲಿಖಿತಾ, ನಾನು ಫಿಲಿಪ್ಪಿನ್ಸ್ನಲ್ಲಿ ಮೆಡಿಕಲ್ ಮಾಡ್ತಾ ಇದೀನಿ. ಕಳೆದ ಬಾರಿ ವಿಧಾನಸಭೆ ಚುನಾವಣೆಗೂ ವೋಟ್ ಮಾಡಲು ಬಂದಿದ್ದೆ. ಈಗ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಬಂದಿದ್ದೀನಿ. ನಮ್ಮ ಊರು, ನಾವು ಅಭಿವೃದ್ಧಿ ಮಾಡಬೇಕು ಎಂದರೆ ಒಳ್ಳೆ ಅಭ್ಯರ್ಥಿಗೆ ಮತ ಹಾಕಬೇಕು. ನಾನು ವೋಟ್ ಮಾಡಿರುವೆ, ಎಲ್ಲರೂ ಬಂದು ಮತದಾನ ಮಾಡಿ ಎಂದು ಮನವಿ ಮಾಡಿದರು. ಈ ವೇಳೆ ಅವರ ತಂದೆ - ತಾಯಿ ಕೂಡ ಇದ್ದರು.
ಅಮೆರಿಕದಿಂದ ಬಂದು ಮತದಾನ: ಕೋಲಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಅಮೆರಿಕದಿಂದ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. ಯುಎಸ್ನ ಚಿಕಾಗೋದಲ್ಲಿ ಉದ್ಯೋಗ ಮಾಡುತ್ತಿರುವ ಕೋಲಾರ ಮೂಲದ ಅನುಪಮಾ ಜೈಕುಮಾರ್ ಅವರು ಮತದಾನಕ್ಕಾಗಿ ಬಂದಿದ್ದಾರೆ. ಕೋಲಾರಕ್ಕೆ ಆಗಮಿಸಿ ಮತಗಟ್ಟೆ ಸಂಖ್ಯೆ 113 ರಲ್ಲಿ ತನ್ನ ಹಕ್ಕು ಚಲಾಯಿಸಿದ್ದಾರೆ. ಇವರು ಕೋಲಾರ ನಗರದ ಮಾಸ್ತಿ ಬಡಾವಣೆ ನಿವಾಸಿಯಾಗಿದ್ದಾರೆ.
ಲಂಡನ್ನಿಂದ ಬಂದ ಯುವತಿ: ಲಂಡನ್ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿರುವ ಮಂಡ್ಯದ ಯುವತಿ ಸೋನಿಕಾ, ಅಲ್ಲಿಂದ ಬಂದು ಮತದಾನ ಮಾಡಿದರು. ಮೂಲತಃ ಮಂಡ್ಯದ ಕಾಳೇನಹಳ್ಳಿಯ ಸೋನಿಕಾ ಎರಡು ವರ್ಷಗಳಿಂದ ಲಂಡನ್ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಾರದ ಹಿಂದೆ ಪ್ಲಾನ್ ಮಾಡಿಕೊಂದು ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ಲಕ್ಷಾಂತರ ರೂ. ಖರ್ಚು ಮಾಡಿ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.
ತಮಿಳುನಾಡಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಮಂಗಳೂರಿನ ಕೃಪಾ ರಸ್ಕಿನ್ ಎಂಬ ವಿದ್ಯಾರ್ಥಿನಿ ಕೂಡ ತಮಿಳುನಾಡಿನಿಂದ ಮಂಗಳೂರಿಗೆ ಆಗಮಿಸಿ ಮತದಾನ ಮಾಡಿದರು. ಅದರಂತೆ ಅನೇಕರು ಹೊರ ರಾಜ್ಯ, ವಿದೇಶಗಳಿಂದ ಆಗಮಿಸಿ ಮತದಾನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು: ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ಹಂಚಿಕೊಂಡ ಯುವತಿಯರು - First Time Voters