ದಾವಣಗೆರೆ: ಎರಡೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠ, ಇಬ್ಬರೇ ಶಿಕ್ಷಕರು. ಶಾಲೆಯಲ್ಲಿ ಮಕ್ಕಳ ಜ್ಞಾನ ಮಾತ್ರ ಖಾಸಗಿ ಶಾಲೆಯ ಮಟ್ಟಕ್ಕಿದೆ. ಜಿಲ್ಲೆಯಲ್ಲಿರುವ ಪುಟ್ಟ ಶಾಲೆಯ ಮಕ್ಕಳ ಓದುವ ಆಸಕ್ತಿ ಮಾತ್ರ ಅಪಾರ. ಇದೀಗ ಈ ಶಾಲೆ ಕಲಿಕಾ ಪ್ರಗತಿಯಲ್ಲಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದೆ. ಚನ್ನಗಿರಿ ತಾಲೂಕಿನ ಯಕ್ಕೇಗೊಂದಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲಿಕಾ ಪ್ರಗತಿಯನ್ನು ಸಾಧಿಸಿ ಇಡೀ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ.
![ವಿದ್ಯಾರ್ಥಿ](https://etvbharatimages.akamaized.net/etvbharat/prod-images/04-09-2024/22374450_thumbneg.jpg)
ಕಬ್ಬಿಣದ ಕಡಲೆ ಆಗಿರುವ 'ಗಣಿತ' ವಿಷಯದಲ್ಲಿ ಬರುವ ಕಠಿಣ ಲೆಕ್ಕಗಳನ್ನು ಬಿಡಿಸುವಲ್ಲಿ ಈ ಶಾಲೆಯ ಮಕ್ಕಳು ನಿಪುಣರು. ಅಲ್ಲದೆ ಮಕ್ಕಳು ಆಂಗ್ಲ ಭಾಷೆಯನ್ನು ನಿರರ್ಗಳವಾಗಿ ಓದುವ ಚಾಕಚಕ್ಯತೆ ಹೊಂದಿರುವುದು ವಿಶೇಷವಾಗಿದೆ.
ಎರಡು ಕೊಠಡಿಗಳಿರುವ ಶಾಲೆಯಲ್ಲಿ 1 ರಿಂದ 5ನೇ ತರಗತಿ ತನಕ ಇದ್ದು, ಒಟ್ಟು 19 ಮಕ್ಕಳು ಇಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಕಡಿಮೆ ಶಿಕ್ಷಕರಿದ್ದರೂ ಮಕ್ಕಳು ನೂರಕ್ಕೆ ನೂರರಷ್ಟು ಕಲಿಕೆಯಲ್ಲಿ ಸಾಧನೆ ಮಾಡಿದ್ದಾರೆ. ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶಾಲೆ ಇಡೀ ಜಿಲ್ಲೆಯ ಜನ ತಿರುಗಿ ನೋಡುವಂಥ ಸಾಧನೆ ಮಾಡಿದೆ.
![ವಿದ್ಯಾರ್ಥಿ](https://etvbharatimages.akamaized.net/etvbharat/prod-images/04-09-2024/22374450_thumbnameg.jpg)
ಮುಖ್ಯಶಿಕ್ಷಕ ಎನ್.ಟಿ.ಲಿಂಗರಾಜ್ ಅವರು ಪ್ರತಿಕ್ರಿಯಿಸಿ "ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆ ಎಫ್ಎಲ್ಎನ್ ಶಾಲೆಯಾಗಿ ಹೊರಹೊಮ್ಮಿದೆ. ಗಣಿತ ಪಠ್ಯದಲ್ಲಿ ಏನೂ ಕಲಿಸುತ್ತೇವೋ ಅದನ್ನು ಮೀರಿ ಮಕ್ಕಳು ಕಲಿತಿದ್ದಾರೆ. ಮೂರನೇ ತರಗತಿಯ ಮಕ್ಕಳು ಭಾಗಕಾರ ಲೆಕ್ಕಗಳನ್ನು ಮಾಡ್ತಾರೆ. ನಮ್ಮ ಹೆಗಲ ಮೇಲೆ ಭಾರ ಹೆಚ್ಚಾಗಿದೆ. ಹೆಚ್ಚು ಕೆಲಸ ಮಾಡುವ ಉತ್ಸಾಹ ಬಂದಿದೆ. ಕನ್ನಡ, ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಓದುತ್ತಾರೆ, ಬರೆಯುತ್ತಾರೆ. ಅತ್ಯುತ್ತಮವಾಗಿ ಕನ್ನಡ ಕಲಿಯುತ್ತಿದ್ದಾರೆ. ಡಯಾಟ್ ತಂಡ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಯನ್ನು ದೃಢೀಕರಿಸಿರುವುದು ಖುಷಿ ತಂದಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕ ಎನ್.ಟಿ.ಲಿಂಗರಾಜ್, ಸಹ ಶಿಕ್ಷಕ ಕೆ.ಬಿ.ತಿಪ್ಪಣ್ಣ ಅವರು ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಿದ್ದಾರೆ. ಶಾಲೆಯ ನೂರಕ್ಕೆ ನೂರರ ಸಾಧನೆಯ ಕೀರ್ತಿ ಈ ಇಬ್ಬರಿಗೆ ಸಲ್ಲುತ್ತದೆ.
![ವಿದ್ಯಾರ್ಥಿನಿ](https://etvbharatimages.akamaized.net/etvbharat/prod-images/04-09-2024/22374450_thumbnailmeg.jpg)
ಶಿಕ್ಷಕ ಕೆ.ಬಿ.ತಿಪ್ಪಣ್ಣ ಪ್ರತಿಕ್ರಿಯಿಸಿ "ಒಂದನೇ ತರಗತಿಯ ಮಕ್ಕಳು, ಕಾಗುಣಿತ ಅಕ್ಷರ ಕೂಡಿಸಿ ಓದುವ ಚಾಕಚಕ್ಯತೆ ಹೊಂದಿದ್ದಾರೆ. ಒಂದು ಸಾವಿರದ ಒಳಗಿನ ಅಂಕಿ ಸಂಖ್ಯೆಗಳನ್ನು ಕೊಟ್ಟರು ಲೆಕ್ಕಾಚಾರ ಬಿಡಿಸುವ ನಿಪುಣರಾಗಿದ್ದಾರೆ. ಕೂಡುವುದು, ಕಳಿಯುವುದು ಲೆಕ್ಕಗಳನ್ನು ಮಕ್ಕಳು ಬಿಡಿಸುತ್ತಾರೆ. ಇಂಗ್ಲಿಷ್ ಪಾಠವನ್ನು ಕೇಳಿ ಅರ್ಥ ಮಾಡಿಕೊಂಡು ಅದನ್ನು ಕನ್ನಡಕ್ಕೆ ಅನುವಾದ ಮಾಡುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ದಾಖಲಾತಿ ಹೆಚ್ಚಿಸುವ ಚಿಂತನೆ ನಡೆದಿದ್ದು, ಇನ್ನಷ್ಟು ಶ್ರಮಿಸಬೇಕಾಗಿದೆ" ಹರ್ಷ ವ್ಯಕ್ತಪಡಿಸಿದರು.
ಶಿಕ್ಷಕರಿಬ್ಬರ ಶ್ರಮಕ್ಕೆ ದೊರೆತ ಪ್ರತಿಫಲ: "ಮಕ್ಕಳಲ್ಲಿ ಆಶಾದಾಯಕ ಕಲಿಕಾ ಚಟುವಟಿಕೆ, ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುವುದು, ಕಲಿಕೆಗೆ ಬೇಕಾದ ಉಪಕರಣಗಳನ್ನು ಬಳಸುವುದು ಮತ್ತು ನಾನಾ ಸಹಪಠ್ಯ ಚಟುವಟಿಕೆಗಳ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡುವುದು. ಪೋಷಕರ ಸಹಕಾರದಿಂದ ಕಲಿಕೆಯ ಉತ್ತೇಜನಕ್ಕೆ ಪ್ರೇರಣೆ ನೀಡುವುದು. ಹೆಚ್ಚು ಹೆಚ್ಚು ಅಭ್ಯಾಸ ಕಲಿಕಾ ಅಂಶಗಳನ್ನು ಬರೆಸುವುದು ಮತ್ತು ಓದಿಸುವುದು. ಸ್ವ-ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವುದು. ಮಕ್ಕಳು ಶಾಲೆಗೆ ಹಾಜರಾಗುವುದು, ಗೃಹಪಾಠ ಮಾಡುವುದು. ಇಲಾಖೆಯ ಹತ್ತು ಅಂಶಗಳ ಕಾರ್ಯಕ್ರಮದ ಅನುಷ್ಠಾನ ಹಾಗೂ ನಿರಂತರ ಮೌಲ್ಯಮಾಪನ ಮಾಡಲಾಗಿದೆ. ಮಕ್ಕಳು ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡಿದ್ದು, ರಾಜ್ಯದ ಜಿಲ್ಲೆಗಳು, ರಾಷ್ಟ್ರದ ರಾಜ್ಯಗಳು ಅದರ ರಾಜಧಾನಿಗಳು ಪಟಪಟನೆ ಹೇಳುತ್ತಾರೆ. ಈ ಎಲ್ಲಾ ಅಂಶಗಳಿಂದ ಕಲಿಕೆಯಲ್ಲಿ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಾಗಿದೆ" ಎಂದು ಅವರು ಹೇಳಿದರು.
ಶಾಲೆಗೆ ನರೇಗಾದಡಿ ಮೂಲಸೌಕರ್ಯ: "ಸಿದ್ದನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ಶಾಲೆಯನ್ನು ನರೇಗಾ ಯೋಜನೆಯಡಿ ಒಟ್ಟು 25.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 4.25 ಲಕ್ಷ ವೆಚ್ಚದ ಆಟದ ಮೈದಾನ, 5.25 ಲಕ್ಷದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. 16 ಲಕ್ಷ ವೆಚ್ಚದಲ್ಲಿ ಅಡುಗೆಮನೆ ಮತ್ತು ಕಾಂಪೌಂಡ್ ನಿರ್ಮಾಣ ಹಂತದಲ್ಲಿವೆ" ಎಂದು ಗ್ರಾ.ಪಂ ಸದಸ್ಯರು ಮಾಹಿತಿ ನೀಡಿದ್ದಾರೆ.
ಗಣಿತ ಕಲಿಕೆಯಲ್ಲಿ ನಿಪುಣರು: "ಗಣಿತ ಕಲಿಕಾ ಆಂದೋಲನ ಕಿಟ್ ಬಳಸಿ ಮಕ್ಕಳಿಗೆ ಆಟಿಕೆಗಳ ಮೂಲಕ, ವಸ್ತುಗಳ ಮುಖಾಂತ ಕಲಿಸುವುದರೊಂದಿಗೆ ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವುದನ್ನು ಸುಳ್ಳಾಗಿಸಿದ್ದಾರೆ. ನಾಲ್ಕು ಅಂಕಿಯ ಭಾಗಕಾರ, ವಿಸ್ತರಣ ರೂಪ, ಸಂಕಲನ, ವ್ಯವಕಲನ, ದಿನನಿತ್ಯದ ವ್ಯವಹಾರಿಕ ಗಣಿತವನ್ನು ಸುಲಭವಾಗಿ ಮಾಡುತ್ತಾರೆ. ಗಣಿತ ಇಂಗ್ಲಿಷ್ನಲ್ಲಿ ಕಾನ್ವೆಂಟ್ ಮಕ್ಕಳನ್ನು ಮೀರಿಸಿದ್ದಾರೆ" ಎಂದು ಸಂತೇಬೆನ್ನೂರು ಭಾಗದ ಶಿಕ್ಷಣ ಇಲಾಖೆಯ ಕ್ಲಸ್ಟರ್ ಸಿಆರ್ಪಿ ಶಂಕರಗೌಡ ಮಾಹಿತಿ ನೀಡಿದರು.
ಇದನ್ನೂ ಓದಿ: ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆ ಈಗ ಪಿಎಂ ಶ್ರೀ ಶಾಲೆ: ಚಿತ್ರಣವನ್ನೇ ಬದಲಿಸಿದ ಶಿಕ್ಷಕ ರಾಮಾಚಾರಿ! - PM Shri School