ಹಾಸನ : ಅರಸೀಕೆರೆ ನಗರದ ಲಕ್ಷ್ಮಿಪುರ ಬಡಾವಣೆಯಲ್ಲಿರುವ ಖಾಸಗಿ ಶಾಲೆ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ಚಿಣ್ಣರು ವ್ಯಾಪಾರ ಮಾಡಿದರು. ಸಂತೆಯಲ್ಲಿ ಪಾಲ್ಗೊಂಡ ಪೋಷಕರಿಗೆ ತೊದಲನುಡಿಯಲ್ಲಿಯೇ ವ್ಯವಹರಿಸಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಿದರು.
6 ವರ್ಷದೊಳಗಿನ ಪುಟಾಣಿ ಮಕ್ಕಳಿಗೆ ಗ್ರಾಮೀಣ ಛದ್ಮವೇಷವನ್ನು ಹಾಕಿಸಿ ವ್ಯಾಪಾರಕ್ಕೆ ಕೂರಿಸಿದ್ದರು. ಕೆಲ ಪೋಷಕರು ಗ್ರಾಹಕರೊಂದಿಗೆ ವ್ಯವಹರಿಸಲು ನೆರವಾಗುತ್ತಿದ್ದು ಕಂಡುಬಂತು. ಅದರ ಜೊತೆ ಮಕ್ಕಳು ತೊದಲ ನುಡಿಯಲ್ಲಿ ಮಾರಾಟದ ವಸ್ತುಗಳನ್ನು ಮತ್ತು ಅದರ ಬೆಲೆಯನ್ನು ಕೂಗಿ ಕೂಗಿ ಗ್ರಾಹಕರನ್ನು ಕರೆಯುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರನ್ನು ಸೆಳೆಯಿತು.
ಸಂತೆಯಲ್ಲಿ ತರಕಾರಿ, ಹಣ್ಣು, ಹೂ ಮತ್ತು ಸೌಂದರ್ಯವರ್ಧಕ ವಸ್ತುಗಳು, ವಿವಿಧ ಬಗೆಯ ಆಟಿಕೆಗಳನ್ನು ಮಾರಾಟಕ್ಕೆ ತಂದಿದ್ದರು. ವಿಶೇಷವೆಂದರೆ ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಳಸುತ್ತಿದ್ದ ಅನೇಕ ವಸ್ತುಗಳು ಮತ್ತು ಆಟಿಕೆಗಳು ಗಮನ ಸೆಳೆದವು. ಮಕ್ಕಳ ಸಂತೆಗೆ ಆಗಮಿಸಿದ ಪೋಷಕರು ವಸ್ತುಗಳನ್ನು ಖರೀದಿಸಿದರು. ಅಲ್ಲದೇ, ಮಕ್ಕಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಚಿಣ್ಣರ ಸಂತೆಗೆ ಪ್ರೋತ್ಸಾಹ ನೀಡಿದರು.
ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನೂ ಬೆಳೆಸುವುದಕ್ಕಾಗಿ ಒಂದು ದಿನದ ಮಕ್ಕಳ ಸಂತೆಯನ್ನ ಆಯೋಜಿಸಲಾಗಿತ್ತು. ಸಂತೆಯಲ್ಲಿ ಹಣ್ಣು- ಹಂಪಲು, ತಿಂಡಿ- ತಿನಿಸು, ಜ್ಯೂಸ್, ಹೋಂ ಮೇಡ್ ಖಾದ್ಯಗಳು, ಐಸ್ ಕ್ರೀಂ ಮುಂತಾದವುಗಳನ್ನು ಮಕ್ಕಳು ಮಾರಾಟ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸಂತೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ವಾರದ ಸಂತೆ ಎಂದರೆ ಏನು? ಎಂಬ ಪರಿಕಲ್ಪನೆ ಮಕ್ಕಳಲ್ಲಿ ಮೂಡಿಸುವ ಒಂದು ಪ್ರಯತ್ನ ಇದಾಗಿತ್ತು.
ಇದನ್ನೂ ಓದಿ : ದಾವಣಗೆರೆ: ವಿರಕ್ತಮಠದ ಎಸ್ಜೆಎಂ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ, ವ್ಯಾಪಾರ ಬಲು ಜೋರು - Makkala Sante - MAKKALA SANTE