ಚಿಕ್ಕೋಡಿ:
- ಪ್ರಿಯಾಂಕಾ ಜಾರಕಿಹೊಳಿ- ಗೆಲುವು
- ಅಣ್ಣಾಸಾಹೇಬ್ ಜೊಲ್ಲೆ- ಸೋಲು
ರಾಜ್ಯ ರಾಜಕಾರಣ ಬೇರೆ, ಆದರೆ ಬೆಳಗಾವಿ ರಾಜಕಾರಣ ಒಂದು ಪವರ್ ಸೆಂಟರ್ ಇದ್ದಂತೆ. ಬೆಳಗಾವಿಯಿಂದಲೇ ಸರ್ಕಾರ ಉರುಳಿಸುವುದು ಬೆಳಗಾವಿಯಿಂದಲೇ ಸರ್ಕಾರ ರಚಿಸುವುದರ ಮಟ್ಟಿಗೆ ಜಿಲ್ಲೆಯ ರಾಜಕಾರಣಿಗಳು ಮತ್ತು ಅವರ ರಾಜಕೀಯ ವರ್ಚಸ್ಸು ಆ ಮಟ್ಟಿಗಿದೆ. ಈ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಎರಡು ಮನೆತನಗಳ ನಡುವೆ ರಾಜಕೀಯ ಜಿದ್ದಾಜಿದ್ದಿ ಪ್ರಾರಂಭವಾಗಿತ್ತು. ಅಂತಿಮವಾಗಿ ಕಾಂಗ್ರೆಸ್ನ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಜಯ ಗಳಿಸುವ ಉತ್ಸಾಹದಲ್ಲಿದ್ದ ಬಿಜೆಪಿ ಭಾರೀ ಸೋಲು ಅನುಭವಿಸಿದೆ.
ಎರಡು ಮನೆತನಗಳ ನಡುವೆ ಬಿಗ್ ಫೈಟ್: ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದ್ರೆ ಅದೃಷ್ಟ ದೇವತೆ ಅಣ್ಣಾಸಾಹೇಬ್ ಜೊಲ್ಲೆ ಕೈ ಹಿಡಿಯಲಿಲ್ಲ. ಅವರ ವಿರುದ್ಧ ಕಾಂಗ್ರೆಸ್ನಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿಗೆ ಕಣಕ್ಕಿಳಿದು ಪ್ರಥಮ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.
ಮತದಾರರ ಮಾಹಿತಿ: ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಒಟ್ಟು 17,41,758 ಮತದಾರರಲ್ಲಿ ಈ ಬಾರಿ 13,85,688 ಮತಗಳನ್ನು, ಹಾಗೂ 4722 ಅಂಚೆ ಮತಗಳು ಚಲಾವಣೆಯಾಗಿದ್ದವು. 2019ರಲ್ಲಿ ಶೇ.75.52ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.78.63 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆದಿತ್ತು.
ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿದ್ದ ಬಿಜೆಪಿ: 1971 ರಲ್ಲಿ ಪ್ರಥಮ ಬಾರಿಗೆ ಮೀಸಲು ಕ್ಷೇತ್ರವಾಗಿ ರಚನೆಯಾದ ಚಿಕ್ಕೋಡಿ ಲೋಕಸಭೆ ಕ್ಷೇತ್ರ ಸತತ 6 ಅವಧಿವರೆಗೆ ಸಹ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಅದಾದ ಬಳಿಕ ಈಗಿನ ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಸಹ ಒಂದು ಬಾರಿ ಜೆಡಿಯುನಿಂದ ಮತ್ತೆರಡು ಬಾರಿ ಬಿಜೆಪಿಯಿಂದ ಅಖಾಡಕ್ಕಿಳಿದು ಗೆದ್ದಿದ್ದರು.
ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election