ಚಿಕ್ಕೋಡಿ: ''ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪರಿವಾರವು ಅನಧಿಕೃತ ಗಣಿಗಾರಿಕೆಯಲ್ಲಿ ತೊಡಗಿದೆ. ಇವರ ಕುಟುಂಬಸ್ಥರು ಗುಡ್ಡ ಕಟಾವು ಮಾಡಿ, ಜಾಗ ಕಬ್ಜಾ ಮಾಡಿದ್ದಾರೆ. ಅಷ್ಟೇ ಅಲ್ಲ, ಇವರು ಹಿಂದೂ ಸಂಸ್ಕೃತಿ ಹಾಗೂ ಹಿಂದೂ ಮಹಾನ್ ನಾಯಕರನ್ನು ಅಪಮಾನಿಸುತ್ತಾರೆ. ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಕಳ್ಳಬಟ್ಟಿ ಸಾರಾಯಿ ತಯಾರಿಸುವವರು ಇವರ ಜೊತೆಗಿದ್ದಾರೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಚಿವ ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಆರೋಪಗಳ ಸುರಿಮಳೆಗೈದರು.
ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿಂದು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ''ನಿಮಗೆ ಪರಿವಾರವಾದಿ ಕಾಂಗ್ರೆಸ್ ಬೇಕೋ, ಪರಂಪರೆಯನ್ನು ಅನಾವರಣ ಮಾಡುವ ಬಿಜೆಪಿ ಬೇಕೋ?, ಎರಡು ಬಾರಿ ಮೋದಿ ಅವರಿಗೆ ಅಶೀರ್ವಾದ ಮಾಡಿದ್ದೀರಿ. ಇದರಲ್ಲಿ ಚಿಕ್ಕೋಡಿ ಸೇರಿದಂತೆ ಕರ್ನಾಟಕದವರ ಪಾಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಿತ್ತೋ, ಇಲ್ವೋ?. ಇದಕ್ಕೆ 70 ವರ್ಷದಿಂದ ಕಾಂಗ್ರೆಸ್ ಅಡ್ಡಗಾಲು ಹಾಕಿತ್ತು. ಪ್ರಧಾನಿ ಮೋದಿ ತಮ್ಮ ಎರಡನೇ ಅವಧಿಯ ಐದು ವರ್ಷದಲ್ಲೇ ರಾಮ ಮಂದಿರ ಪೂರ್ಣಗೊಳಿಸಿದರು. ಖರ್ಗೆ, ರಾಹುಲ್ ರಾಮ ಮಂದಿರ ಪ್ರತಿಪ್ಠಾಪನೆಗೆ ಬರಲ್ಲ. ಅವರಿಗೆ ವೋಟ್ ಬ್ಯಾಂಕ್ ಭಯವಿತ್ತು. ಆದರೆ, ನಮಗೆ ಯಾವುದೇ ವೋಟ್ ಬ್ಯಾಂಕ್ ಭಯವಿಲ್ಲ'' ಎಂದು ತಿಳಿಸಿದರು.
''ಖರ್ಗೆ ಕಾಶ್ಮೀರ ವಿಷಯವಾಗಿ ರಾಜಸ್ಥಾನ, ಕರ್ನಾಟಕ ಏನು ಮಾಡಬೇಕಿದೆ ಎನ್ನುತ್ತಾರೆ. ಆದರೆ, ಚಿಕ್ಕೋಡಿ ಯುವಕರು ಕಾಶ್ಮೀರಕ್ಕಾಗಿ ಪ್ರಾಣ ಕೊಡಲು ಸಿದ್ಧರಿದ್ದಾರೆ ಎಂಬುವುದು 80 ವರ್ಷದ ಖರ್ಗೆ ಅವರಿಗೆ ಗೊತ್ತಾಗಿಲ್ಲ. ಆತಂಕವಾದವನ್ನು ಮೋದಿ ನಿರ್ಮೂಲನೆ ಮಾಡಿದ್ದಾರೆ. ಪಿಎಫ್ಐ ರದ್ದು ಮಾಡಿದ್ದಾರೆ'' ಎಂದು ಶಾ ಹೇಳಿದರು.
ಬೆಂಗಳೂರಿನಲ್ಲಿ ಬಾಂಬ್ ಸ್ಪೋಟಿಸಿದ್ದು ದೇಶವಿರೋಧಿ ತತ್ವ: ಇದೇ ವೇಳೆ, ''ಕರ್ನಾಟಕದಲ್ಲಿ ಕಾಂಗ್ರೆಸ್ ಎಸ್ಡಿಪಿಐ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದೆ. ಸರ್ಕಾರ ರಚನೆ ಆಗುತ್ತಲೇ ಬೆಂಗಳೂರು ಬಾಂಬ್ ಸ್ಫೋಟವಾಯಿತು. ಎಸ್ಡಿಪಿಐನ ದೇಶವಿರೋಧಿ ತತ್ವವೇ ಈ ಬಾಂಬ್ ತಯಾರಿಸಿದೆ. ಎನ್ಐಎ ತನಿಖೆ ಕೈಗೆತ್ತಿಕೊಂಡಾಗ ಈ ಕೃತ್ಯ ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರ ಏನ್ ಮಾಡುತ್ತೋ ಮಾಡಲಿ. ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಗೆಲ್ಲಿಸಿಕೊಡಿ, ಮೋದಿ ಸರ್ಕಾರ ಕರ್ನಾಟಕವನ್ನು ಸುರಕ್ಷಿತವಾಗಿ ಇರಿಸಲಿದೆ'' ಎಂದು ಅವರು ತಿಳಿಸಿದರು.
ಧರ್ಮ ಪರಿವರ್ತನೆಗೆ ಒಪ್ಪದೇ ಇದ್ದುದಕ್ಕೆ ನೇಹಾ ಕೊಲೆ: ''ಈಗ ನೇಹಾ ಹಿರೇಮಠ ಪ್ರಕರಣವಾಗಿದೆ. ಇದು ವ್ಯಕ್ತಿಗತ ವಿಷಯ ಎನ್ನುತ್ತಾರೆ. ಏನು ವ್ಯಕ್ತಿಗತ ವಿಷಯ?. ಒಬ್ಬ ಹುಡುಗಿ ಧರ್ಮ ಪರಿವರ್ತನೆ ಮಾಡಿಕೊಳ್ಳಲು ಇಚ್ಛಿಸದೇ ಇರುವುದಕ್ಕೆ ಹೊಡೆದು ಹಾಕಲಾಗಿದೆ. ನಾನು ಹುಬ್ಬಳ್ಳಿಯಲ್ಲಿ ಆಕೆಯ ತಾಯಿಯನ್ನು ಭೇಟಿ ಮಾಡಿದ್ದೇನೆ. ಧರ್ಮ ಪರಿವರ್ತನೆಗೆ ಒತ್ತಡ ಇತ್ತು ಎಂದು ಅವರು ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ತಾಕೀತು ಮಾಡಲು ಬಯಸುತ್ತೇನೆ. ನೀವು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲು ಆಗದೇ ಇದ್ದರೆ, ಸಿಬಿಐಗೆ ತನಿಖೆಗೆ ಒಪ್ಪಿಸಿ. ಸಿಬಿಐಗೆ ಕೊಟ್ಟರೆ, ನೇಹಾಗೆ ಅನ್ಯಾಯ ಮಾಡಿವರನ್ನು ಉಲ್ಟಾ ತೂಗು ಹಾಕಿ, ಸರಿ ಮಾಡುವ ಕೆಲಸ ಮಾಡುತ್ತೇವೆ'' ಎಂದು ಎಚ್ಚರಿಸಿದರು.
₹4 ಸಾವಿರ ಕಡಿತ ಯಾಕೆ?: ರಾಜ್ಯದಲ್ಲಿ ನಮ್ಮ ಬಿಜೆಪಿ ಸಮಯದಲ್ಲಿ 10 ಸಾವಿರ ಹಣವನ್ನು ರೈತರಿಗೆ ಕೊಡುತ್ತಿದ್ದೆವು. ಮೋದಿ ಅವರು 6 ಸಾವಿರ ರೂ ಕಳುಹಿಸಿದ್ದರು. ಇಲ್ಲಿನ ಸರ್ಕಾರವು 4 ಸಾವಿರ ಕೊಡುತ್ತಿತ್ತು. ನೀವು (ಕಾಂಗ್ರೆಸ್) ಒಂದೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೀರಿ. ಯಾಕೆ 4 ಸಾವಿರ ರೂಪಾಯಿ ಕಡಿತ ಮಾಡಿದ್ದೀರಿ ಎಂದು ಖರ್ಗೆ, ರಾಹುಲ್ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಕೇಳಲು ಬಯಸುತ್ತೇನೆ. ಅಲ್ಲದೇ, ಕೇವಲ 10 ತಿಂಗಳಲ್ಲಿ ಕರ್ನಾಟಕವನ್ನು ಬರ್ಬಾದ್ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಾನೂ ಹೋರಾಟ ಮಾಡುತ್ತೇನೆ: ನೇಹಾ ತಂದೆ ನಿರಂಜನ ಹಿರೇಮಠ