ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಇಂದು (ಶುಕ್ರವಾರ) ಕೂಡ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ, ಮೂಡಿಗೆರೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು (ಜೂನ್ 28 ರಂದು) ಮಾತ್ರ ಶಾಲೆಗಳಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್ ಪರಮಾನಂದ ಅವರು ಆದೇಶ ನೀಡಿದ್ದಾರೆ.
ಭಾರಿ ಗಾಳಿ ಸಹಿತ ಬಿಟ್ಟು ಬಿಟ್ಟು ಸುರಿಯುತ್ತಿರೋ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ತುಂಬಾ ಗಾಳಿ ಬೀಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಸರ್ಕಾರಿ - ಖಾಸಗಿಯ 1ರಿಂದ 10ನೇ ತರಗತಿಯ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪಿಯುಸಿ ಹಾಗೂ ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪ್ರತಿ ಶಾಲೆಗೂ ರಜೆ ಘೋಷಿಸಲಾಗಿದೆ.
ಅದೇ ರೀತಿ ಕಳಸ ತಾಲೂಕಿನ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳು, ಅಂಗನವಾಡಿಗಳು ರಜೆ ಘೋಷಿಸಲಾಗಿದೆ. ರಜೆ ಘೋಷಣೆ ಹಿನ್ನೆಲೆ ವಿದ್ಯಾರ್ಥಿಗಳು ತಮ್ಮ ಮನೆಗೆ ವಾಪಸ್ ಹೋಗುತ್ತಿದ್ದಾರೆ. ರಾತ್ರಿ ಮಳೆ ಹೆಚ್ಚಾದ ಕಾರಣಕ್ಕೆ ತಡವಾಗಿ ರಜೆ ಘೋಷಣೆ ಮಾಡಲಾಗಿದೆ.
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಬಿಟ್ಟುಬಿಡದೇ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯಿಂದ ಅವಾಂತರಗಳು ಕೂಡ ಜರುಗುತ್ತಿದ್ದು, ಜನರು ಮನೆಯಿಂದ ಹೊರಬರುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಗಳ ಹರಿವಿನ ಮಟ್ಟದಲ್ಲಿ ಹೆಚ್ಚಳವಾಗಿದೆ.