ಮೈಸೂರು: ಎರಡು ದಿನಗಳಿಂದ ಮೈಸೂರು - ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಮೈಸೂರಿನ ಟಿ.ಕೆ.ಲೇಔಟ್ ನಿವಾಸದಲ್ಲಿ ಮೈಸೂರು, ಕೊಡಗು, ಚಾಮರಾಜನಗರ, ಜಿಲ್ಲೆಯ ಸಚಿವರು, ಶಾಸಕರು ವಿಧಾನ ಪರಿಷತ್ ಸದಸ್ಯರು, ಹಾಗೂ ನಿಗಮ ಮಂಡಳಿಯ ಅಧ್ಯಕ್ಷರ ಜತೆ ಬೆಳಗಿನ ಉಪಹಾರ ಸೇವಿಸಿದರು. ನಂತರ ಪ್ರಸ್ತುತ ರಾಜಕೀಯ ಸನ್ನಿವೇಶ, ರಾಜ್ಯಪಾಲರ ನೋಟಿಸ್ ಹಾಗೂ ಬಿಜೆಪಿ ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ಖಚಿತ ಪಡಿಸಿವೆ.
ಮೈಸೂರು ಟಿ.ಕೆ.ಲೇಔಟ್ನಲ್ಲಿರುವ ಸಿಎಂ ನಿವಾಸದಲ್ಲಿ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಮಡಿಕೇರಿಯ ಶಾಸಕ ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ, ಯತೀಂದ್ರ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ, ಡಾ.ತಿಮ್ಮಯ್ಯ, ದರ್ಶನ್ ಧೃವನಾರಾಯಣ್, ಶಾಸಕ ಅನಿಲ್ ಚಿಕ್ಕಮಾದು, ಶಾಸಕ ಜಿ.ಟಿ. ಹರೀಶ್ ಗೌಡ, ಸೇರಿದಂತೆ ನಿಗಮ ಮಂಡಳಿಯ ಅಧ್ಯಕ್ಷರು ಈ ಉಪಹಾರ ಕೂಟದಲ್ಲಿ ಭಾಗವಹಿಸಿದ್ದರು.
ನಿನ್ನೆ ಸಿಎಂ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ವರುಣ ವಿಧಾನಸಭಾ ಕ್ಷೇತ್ರದ ಬೊಕ್ಕಹಳ್ಳಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮ ರದ್ದು ಮಾಡಿ, ಕೊಡಗು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಶನಿವಾರ ಬೆಳಗ್ಗೆ 9 ಗಂಟೆಗೆ ಅದೇ ಬೊಕ್ಕಹಳ್ಳಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಇಂದೂ ಸಹ ಆ ಗ್ರಾಮಗಳಿಗೆ ಭೇಟಿ ನೀಡದೇ, ಹಾಸನ ಶಿರಾಡಿ ಘಾಟ್ನ ಭೂಕುಸಿತ ಪ್ರದೇಶಗಳಿಗೆ ತೆರಳಿದ್ದು, ಹೀಗೆ ಎರಡು ದಿನವೂ ತಮ್ಮ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಮುಖ್ಯಮಂತ್ರಿ ಭೇಟಿ ರದ್ದು ಮಾಡಿದರು.
ಇಂದು ಬಿಜೆಪಿ ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ಸಿಎಂ ತಮ್ಮ ಮನೆಯ ಬಳಿ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.
ಇದನ್ನೂ ಓದಿ: ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಶೋಭಾ ಕರಂದ್ಲಾಜೆ - Shobha Karandlaje