ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಕೊಳ್ಳೇಗಾಲ ತಾಲೂಕಿನ ನರಿಪುರ ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಳಿಕ ಸತ್ತೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿರುವ ಲಕ್ಷ್ಮಮ್ಮ ಸೊಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 12.15ಕ್ಕೆ ರಸ್ತೆ ಮೂಲಕ ಕೊಳ್ಳೇಗಾಲಕ್ಕೆ ಆಗಮಿಸುತ್ತಾರೆ. ಇಲ್ಲಿನ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿರುವ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಗುತ್ತಾರೆ.
ಮಧ್ಯಾಹ್ನ 3.15 ಗಂಟೆಗೆ ರಸ್ತೆಯ ಮೂಲಕ ಯಳಂದೂರಿಗೆ ತೆರಳಲಿದ್ದಾರೆ. ಬಳಿಕ ಯಳಂದೂರಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿರುವ ಯಳಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮಗಳ ಬಳಿಕ ಸಂಜೆ 4.40 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್ ತೆರಳಲಿದ್ದಾರೆ.
ಇದನ್ನೂ ಓದಿ: ಔಷಧ ನಿಯಂತ್ರಣ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವಿಲೀನಕ್ಕೆ ಸಂಪುಟ ಅಸ್ತು
ಚಾಮರಾಜನಗರಕ್ಕೆ 6ನೇ ಬಾರಿ ಸಿಎಂ: ಚಾಮರಾಜನಗರಕ್ಕೆ ಈ ಹಿಂದೆ ಮುಖ್ಯಮಂತ್ರಿಗಳಾದವರು ಹಿಂದೇಟು ಹಾಕಿದ್ದರೆ, ಸಿದ್ದರಾಮಯ್ಯ ಮೌಢ್ಯಕ್ಕೆ ಸೊಪ್ಪು ಹಾಕದೇ 6ನೇ ಬಾರಿಗೆ ಗಡಿಜಿಲ್ಲೆಗೆ ಶನಿವಾರ ಭೇಟಿ ಕೊಡಲಿದ್ದಾರೆ. ಎರಡನೇ ಬಾರಿಗೆ ಸಿಎಂ ಆದ ಮೂರು ತಿಂಗಳೊಳಗೆ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಕೆಡಿಪಿ ಸಭೆ ನಡೆಸಿದ್ದರು. ಆ ಬಳಿಕ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸಿದ್ದರು.