ಮಂಡ್ಯ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ರಾತ್ರಿ ವಿಶ್ವವಿಖ್ಯಾತ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ನಡೆಯಿತು. ರಾತ್ರಿ 8:30 ಗಂಟೆಗೆ ಬ್ರಹ್ಮೋತ್ಸವ ಆರಂಭವಾಗಿತ್ತು. ಪೂರ್ವ, ಫಲ್ಗುಣಿ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕಾತರದ ಕಂಗಳಿಂದ ಕಾಯುತ್ತಿದ್ದ ಅಪಾರ ಭಕ್ತರು ಜಯಘೋಷಗಳೊಂದಿಗೆ ರಥ ಎಳೆದು ಭಕ್ತಿಭಾವ ಮೆರೆದರು.
ವಿವಿಧ ಬಗೆಯ ಹೂಗಳಿಂದ ಸಿಂಗಾರಗೊಂಡಿದ್ದ ಚೆಲುವನಾರಾಯಣಸ್ವಾಮಿ ರಥ ಪ್ರಮುಖ ಆಕರ್ಷಣೆಯಾಗಿತ್ತು. ರಥಬೀದಿಯಲ್ಲಿ ಸಾಗುವ ವೇಳೆ ನೂಕು ನುಗ್ಗಲು ಉಂಟಾಯಿತು. ಭಕ್ತರು ಭಕ್ತಿಗೀತೆಗಳನ್ನು ಪಠಿಸುತ್ತಾ ಹೆಜ್ಜೆ ಹಾಕುತ್ತಿದ್ದರು. ದೇವಾಲಯದ ರಾಜಬೀದಿಯ ಇಕ್ಕೆಲಗಳಲ್ಲಿ ಹಾಗು ಕಟ್ಟಡಗಳ ಮೇಲೆ ನಿಂತು ಸ್ವಾಮಿಯ ಉತ್ಸವಮೂರ್ತಿ ಹಾಗೂ ಶ್ರೀದೇವಿ-ಭೂದೇವಿ ಅಮ್ಮನವರನ್ನು ಜನರು ಕಣ್ತುಂಬಿಕೊಂಡರು.
ರಥೋತ್ಸವಕ್ಕೆ ಮುನ್ನ ಅಮ್ಮನವರ ಸನ್ನಿಧಿಯ ಬಳಿ ಯಾತ್ರಾದಾನ ಕಾರ್ಯಕ್ರಮ ನಡೆಯಿತು. ಇದಾದ ನಂತರ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿಗೆ ರಾಜಮುಡಿ ಧಾರಣೆ ಹಾಗೂ ಶ್ರೀದೇವಿ, ಭೂದೇವಿ ಅಮ್ಮ ಮತ್ತು ರಾಮಾನುಜಾಚಾರ್ಯ ವಿಗ್ರಹಗಳನ್ನು ವಿಶೇಷ ಪುಷ್ಪಗಳಿಂದ ಅಲಂಕರಿಸಲಾಯಿತು.
ಚಿನ್ನಲೇಪಿತ ಛತ್ರಿ ದಾನ: ಮೇಲುಕೋಟೆಗೆ ಸಚಿವ ಚಲುವರಾಯಸ್ವಾಮಿ ದಂಪತಿ ಭೇಟಿ ನೀಡಿ ಮನೆ ದೇವರ ದರ್ಶನ ಪಡೆದು, 5.45 ಕೆ.ಜಿ ಬೆಳ್ಳಿಯಿಂದ ತಯಾರಿಸಿದ ಚಿನ್ನಲೇಪಿತ ಛತ್ರಿಯನ್ನು ದಾನ ಮಾಡಿದರು.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, "ನಮ್ಮ ಮನೆ ದೇವರು ಚಲುವನಾರಾಯಣಸ್ವಾಮಿ. ಬಹಳ ವರ್ಷದಿಂದ ದೇವಸ್ಥಾನಕ್ಕೆ ಬರುತ್ತಿದ್ದೇವೆ. ವೈರಮುಡಿಗೆ ದೇವಸ್ಥಾನಕ್ಕೆ ಛತ್ರಿ ಕೊಟ್ಟಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ. ಮಳೆ, ಬೆಳೆ ಆಗಲಿ, ನಾಡಿಗೆ ಒಳ್ಳೆಯದಾಗಲಿ" ಎಂದರು.
ಚುನಾವಣೆ ಕುರಿತ ಪ್ರಶ್ನೆಗೆ, "ಲೋಕಸಭೆ ಚುನಾವಣೆಗೆ ಸಂಬಂಧಿಸಿ 8 ತಾಲೂಕಿನಲ್ಲಿ ಪ್ರಚಾರ ಮಾಡುತ್ತಿದ್ದೇವೆ. ನಮ್ಮ ಗೆಲುವಿಗೆ ಚಲುವನಾರಾಯಣಸ್ವಾಮಿ ಆಶೀರ್ವಾದ ಕೇಳಿಕೊಂಡಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ನನಗೆ ವೈರಿಯಲ್ಲ. ನಾವು ವೈಯಕ್ತಿಕವಾಗಿ ಸ್ನೇಹಿತರು" ಎಂದು ಹೇಳಿದರು.
ರಥೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಕಾರು ಹಾಗೂ ಬೈಕ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್ ಭದ್ರತೆ ಕಂಡುಬಂತು.
ಇದನ್ನೂ ಓದಿ: ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ: ಭದ್ರತೆಯೊಂದಿಗೆ ವಜ್ರ ಖಚಿತ ವೈರಮುಡಿ ರವಾನೆ - Melukote Vairamudi Utsava