ಹುಬ್ಬಳ್ಳಿ: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಧಾರವಾಡದ ಆಸ್ಮಾ ವಂಚನೆಗೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ ಅಪರಿಚಿತರು ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ.
ಕುನಾಲ್ ಸಿಂಗ್, ಜ್ಯೋತಿ ಶರ್ಮಾ, ಪ್ರಿಯಾ, ಸಲಾಂದರ್, ರಿತು ವಿ ಶರ್ಮಾ, ರಾಹುಲ್ ಎಂಬ ಹೆಸರಿನವರು ಆಸ್ಮಾ ಅವರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಬಗ್ಗೆ ಹೇಳಿದ್ದರು. ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿ, ನಿಮ್ಮ ಹಣವನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕೊಡುತ್ತೇವೆ ಎಂದ ಹಣ ವರ್ಗಾಯಿಸಿಕೊಂಡಿದ್ದರು. ನನ್ನ ಖಾತೆಯಿಂದ 23.58 ಲಕ್ಷ ರೂ ವರ್ಗಾಯಿಸಿಕೊಂಡಿದ್ದಾರೆ. ಆ ಬಳಿಕ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಂಚಕರು ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರಾಗಿ ನಂಬಿಸಿ ಮೋಸ ಮಾಡುತ್ತಾರೆ. ಷೇರು ಮಾರುಕಟ್ಟೆಯ ಹೆಸರಲ್ಲಿ ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಹೇಳಿ ಪಂಗನಾಮ ಹಾಕುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಆದ್ದರಿಂದ ಜನರು ಅಪರಿಚಿತರಿಗೆ ತಮ್ಮ ದಾಖಲಾತಿಗಳನ್ನು ನೀಡುವುದು, ಹಣ ವರ್ಗಾಯಿಸುವುದನ್ನು ಮಾಡಬಾರದು ಎಂದು ಪೊಲೀಸರು ಜಾಗೃತಿ ಮೂಡಿಸತ್ತಲೇ ಇದ್ದಾರೆ.
ಪೊಲೀಸ್ ಆಯುಕ್ತರಿಂದ ಗಡಿಪಾರು ಆದೇಶ: ಹು - ಧಾ ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಸುಲಿಗೆ ಮಾಡುತ್ತ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಆರೋಪದ ಮೇಲೆ ತಳೇಹುಬ್ಬಳ್ಳಿ ಶಿವಶಂಕರ ಕಾಲೊನಿಯ ನಿವಾಸಿ ಅರ್ಜುನ ಬುಗುಡಿಯನ್ನು ಗಡಿಪಾರು ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.
ಆಟೊ ಚಾಲಕನಾಗಿದ್ದ ಅರ್ಜುನ ಗುಂಪು ಕಟ್ಟಿಕೊಂಡು ಸಾರ್ವಜನಿಕರಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ. ರಾತ್ರಿ ವೇಳೆ ಲಾರಿಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ನಡೆಸಿ ದರೋಡೆ ಕೃತ್ಯ ಎಸಗುತ್ತ, ಭಯದ ವಾತಾವರಣ ಸೃಷ್ಟಿಸುತ್ತಿದ್ದ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳಿದ್ದು, ರೌಡಿ ಪಟ್ಟಿಯಲ್ಲಿ ಸಹ ಸೇರ್ಪಡೆಯಾಗಿದೆ. ಹೀಗಿದ್ದರೂ ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿದ್ದರಿಂದ ತುಮಕೂರು ಜಿಲ್ಲೆಯ ಶಹರ ಠಾಣೆ ವ್ಯಾಪ್ತಿಗೆ ಆರು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ ಎಂದು ಹು - ಧಾ ಪೊಲೀಸರ ಕಮೀಷನರ್ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನಕಲಿ HSRP ಲಿಂಕ್ ಕಳಿಸಿ ಸೈಬರ್ ಖದೀಮರಿಂದ ವಂಚನೆ; ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸೂಚನೆ