ಬೆಂಗಳೂರು: ''ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ಗೆ ಟಿಕೆಟ್ ಸಿಕ್ಕಿದರೆ ಸ್ಪರ್ಧಿಸೋಣ ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದೆ. ನನಗೆ ಶಾಸಕನಾಗಬೇಕೆಂಬ ಹಪಹಪಿ ಇಲ್ಲ. ಈ ಬಗ್ಗೆ ಬಿಜೆಪಿ-ಜೆಡಿಎಸ್ ಹೈಕಮಾಂಡ್ ನಾಯಕರು ಚರ್ಚಿಸಿ ತೀರ್ಮಾನ ಮಾಡುತ್ತಾರೆ'' ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆ.ಪಿ.ಭವನದಲ್ಲಿ ಇಂದು ನಡೆದ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪಕ್ಷದ ಬಲವರ್ಧನೆಗೆ ಇಂದು ಸಭೆ ಮಾಡಿದ್ದೇವೆ. ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರನ್ನೂ ಗುರುತಿಸುವ ಕೆಲಸ ಮಾಡುತ್ತೇನೆ. ಇಲ್ಲಿ ಯಾವುದೇ ಗೊಂದಲಕ್ಕೆಡೆ ಇಲ್ಲ" ಎಂದರು.
ಮುಂದುವರೆದು ಮಾತನಾಡಿ, "ಚನ್ನಪಟ್ಟಣ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರ. 60ರಿಂದ 70 ಸಾವಿರ ಜೆಡಿಎಸ್ ಮತಗಳು ಕ್ಷೇತ್ರದಲ್ಲಿವೆ. ದೇವೇಗೌಡರ ಕೊಡುಗೆಯನ್ನು ಜನ ಮರೆತಿಲ್ಲ. ಕುಮಾರಸ್ವಾಮಿ 130 ಕೆರೆ, ಕಟ್ಟೆ ತುಂಬಿಸಿದ್ದಾರೆ'' ಎಂದು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ''ರಾಜ್ಯ ಸರ್ಕಾರ 224 ಕ್ಷೇತ್ರಗಳ ಪೈಕಿ 136 ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೂ ಅನುದಾನ ಕೊಟ್ಟಿಲ್ಲ. ಈಗ ಇದ್ದಕ್ಕಿದ್ದಂತೆ ಚನ್ನಪಟ್ಟಣದ ಮೇಲೆ ಕಾಂಗ್ರೆಸ್ಗೆ ಪ್ರೀತಿ ಏಕೆ?'' ಎಂದು ಚುನಾವಣಾ ಮುನ್ನ ಅನುದಾನ ಘೋಷಣೆ ನಿಲುವನ್ನು ಟೀಕಿಸಿದರು.
''ಮುಡಾ ಹಗರಣ ವಿಚಾರದಲ್ಲಿ ಸಿಎಂ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ನೋಡಿದ್ದೇವೆ. ಸದನದಲ್ಲಿ ಸಭಾಧ್ಯಕ್ಷರ ರಕ್ಷಣೆ ಪಡೆದು ಪಲಾಯನ ಮಾಡಿದ್ದಾರೆ. ಇದರ ವಿರುದ್ಧ ನಾವು ಪಾದಯಾತ್ರೆ ಮಾಡಿದ್ದೇವೆ. ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಸಿಎಂ ಸುಳ್ಳು ದಾಖಲೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ನಮಗೆ ಹಕ್ಕಿದೆ. ಸಿಎಂ ರಾಜ್ಯದ ಜನತೆಗೆ ಉತ್ತರ ನೀಡಬೇಕು" ಎಂದರು.
''ನಾಳೆ ಸಿಎಂ ರಾಜೀನಾಮೆಗೆ ಆಗ್ರಹಿಸಿ, ಬಿಜೆಪಿ ಜೊತೆಗೂಡಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಲಿದ್ದೇವೆ" ಎಂದು ಇದೇ ವೇಳೆ ಸುರೇಶ್ ಬಾಬು ತಿಳಿಸಿದರು.