ರಾಮನಗರ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅವರು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಸತತವಾಗಿ 4ನೇ ದಿನವೂ ಬಿರುಸಿನ ಪ್ರಚಾರ ನಡೆಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ, ಬೂಹಳ್ಳಿ ಮತ್ತು ಚನ್ನಪಟ್ಟಣ ಪಟ್ಟಣಗಳಲ್ಲಿ ಮತಯಾಚನೆ ಮಾಡಿದರು.
ಚನ್ನಪಟ್ಟಣ ತಾಲೂಕಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಜಾರಿಗೊಳಿಸಲು ಮಾಡಿದ ಹೋರಾಟವನ್ನು ಮೆಲುಕು ಹಾಕಿದರು. ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ಸರ್ಕಾರವನ್ನು ಸರ್ಕಾರ ಎಂದು ಕರೆಯಲು ಆಗುವುದಿಲ್ಲ. ನೀವು ನಿಮ್ಮ ಆತ್ಮವನ್ನು ಪ್ರಶ್ನಿಸಿ, ಇದನ್ನು ಸರ್ಕಾರ ಎಂದು ಕರೆಯುತ್ತೀರಾ? ಎಂದು ಪ್ರಶ್ನಿಸಿದರು.
1957ರಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಪ್ರಾರಂಭಿಸಿದ್ದೆ. ನಿಮ್ಮ ಬೆಂಬಲದಿಂದ ನಾನು ವರದೇಗೌಡರನ್ನು ವಿಧಾನಸೌಧಕ್ಕೆ ಕರೆದೊಯ್ದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಬಡವರಿಗೆ ಐದು ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದೆ. ನಾವು ಶಾಂತಿಯಾಗಿ ಬದುಕಬೇಕು. ನಾನು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಆಗಿದ್ದೆ. ನಾವು ಎಲ್ಲರೂ ಮಾನವರು, ಹಿಂದೂ ಮತ್ತು ಮುಸ್ಲಿಂ ನಾವೆಲ್ಲರೂ ಒಂದೇ. ಮುಸ್ಲಿಂ ಮಕ್ಕಳಿಗಾಗಿ ಶಾಲೆಗಳ ಸ್ಥಾಪನೆ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಗಳನ್ನು ನೆನೆದರು.
ಇಂತಹ ನಿರ್ಲಕ್ಷ್ಯತೆ ಇರುವ ಸರ್ಕಾರವನ್ನು ಎಂದೂ ನೋಡಿಲ್ಲ. ಸರ್ಕಾರದ ನೀತಿಗಳನ್ನು ಜನರು ಪ್ರಶ್ನಿಸಬೇಕಾಗಿದೆ. ನಮ್ಮ ಭವಿಷ್ಯ ಅಪಾಯಕಾರಿ ಸ್ಥಿತಿಯಲ್ಲಿದೆ. ನಾವು ಜನರಿಗೆ ಸೇವೆ ಮಾಡುವ ಸರ್ಕಾರವನ್ನು ಆಯ್ಕೆ ಮಾಡಬೇಕು. ಕೊರತೆ ಇರುವ ಸರ್ಕಾರವನ್ನು ಅಲ್ಲ ಎಂದರು.
ಶೋಭಾ ಕರಂದ್ಲಾಜೆ ಪ್ರಚಾರ: ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು ಮೂರು ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಭರವಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೂಡ ಹಣ ಬಿಡುಗಡೆ ಮಾಡುತ್ತಿಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು, ನಿಖಿಲ್ ಕುಮಾರಸ್ವಾಮಿ ಕಣ್ಣೀರು ವಿಚಾರವಾಗಿ ಮಾತನಾಡಿ, ಭಾವನೆಗಳು ಇರುವವರಿಗೆ ಮಾತ್ರ ಕಣ್ಣೀರು ಬರುತ್ತದೆ. ಕಾಂಗ್ರೆಸ್ನವರಿಗೆ ಯಾಕೆ ಕಣ್ಣೀರು ಬರಬೇಕು. ಸರ್ಕಾರದ ಗ್ಯಾರಂಟಿಗಳು ಸರಿಯಿಲ್ಲ. ಬಸ್ ಕೆಟ್ಟು ಹೋದ್ರೆ ರಿಪೇರಿಗೆ ಹಣ ಇಲ್ಲ. ಇನ್ನೆರಡು ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣ ಇರುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ನನ್ನ ಕೊನೇ ಉಸಿರಿರೋವರೆಗೂ ರಾಜಕಾರಣ ಮಾಡುತ್ತೇನೆ: ದೇವೇಗೌಡ ಘೋಷಣೆ, ಮೊಮ್ಮಗನ ಗೆಲುವಿಗೆ ಶಪಥ