ಶಿವಮೊಗ್ಗ: ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಪತ್ನಿ ಕವಿತಾ ಆಗ್ರಹಿಸಿದ್ದಾರೆ.
ನಗರದ ಕೆಂಚಪ್ಪ ಬಡಾವಣೆಯ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಚೇರಿಯಲ್ಲಿ ನಡೆದಿರುವ ಸತ್ಯ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆದಾಗ ಮಾತ್ರ ನನ್ನ ಪತಿಯ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.
ಡೆತ್ನೋಟ್ನಲ್ಲಿದ್ದ ಬ್ಯಾಂಕಿನ ಅಧಿಕಾರಿ ಇನ್ನೂ ಬಂಧನ ಆಗಿಲ್ಲ, ಒಬ್ಬ ಹೆಣ್ಣುಮಗಳ ಗೋಳು ಗೊತ್ತಾಗಬೇಕಾದ್ರೆ ಬ್ಯಾಂಕಿನ ಅಧಿಕಾರಿ ಬಂಧನವಾಗಬೇಕು, ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಪ್ರಕರಣದ ತನಿಖೆ ಯಾರೇ ನಡೆಸಿದರು ಸತ್ಯ ಹೊರಬರಬೇಕು. ಕಚೇರಿಯಲ್ಲಿ ಅವರ ಮೇಲೆ ಹಾಕಿದ್ದ ಒತ್ತಡ ಮತ್ತು ಏನೆಲ್ಲ ನಡೆಯಿತು ಎಲ್ಲಾನು ತಿಳಿಬೇಕು ಎಂದು ಕವಿತಾ ಒತ್ತಾಯಿಸಿದರು.
ಕೇವಲ ಹಣದ ವ್ಯವಹಾರ ನಡೆದಿದೆ ಎಂದು ಮಾತ್ರ ಹೇಳಲಾಗುತ್ತಿದೆ, ಉಳಿದ ವಿಷಯ ಹೊರಗೆ ಬರುತ್ತಿಲ್ಲಾ. ಎಲ್ಲಾ ಹಗರಣವನ್ನು ನನ್ನ ಪತಿ ಮೇಲೆ ಹಾಕಲು ಪ್ರಯತ್ನ ಮಾಡಿದ್ದಾರೆ. ಇಲಾಖೆಯಲ್ಲಿ ಉನ್ನತ ಅಧಿಕಾರಿಗಳು ಇದ್ದರೂ ಕೇವಲ ನನ್ನ ಪತಿ ಮೇಲೆ ಒತ್ತಡ ಹಾಕಿದ್ದು ಏತಕ್ಕೆ ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದಾರೆ, ಅದೆಲ್ಲಾ ತನಿಖೆಯಿಂದ ಹೊರ ಬರಬೇಕು. ನಾನು ಸಿಎಂಗೂ ಇದನ್ನೇ ಕೇಳೋದು, ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದರು.