ಚಾಮರಾಜನಗರ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಆದರೆ ಗುರುವಾರ ಎಸ್ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಚಾಮರಾಜನಗರ ಜಿಲ್ಲೆಯ ಟಾಪ್ 10 ವಿದ್ಯಾರ್ಥಿಗಳಲ್ಲಿ 8 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.
ಹೌದು, ಚಾಮರಾಜನಗರದ ಟಾಪ್ 10 ವಿದ್ಯಾರ್ಥಿಗಳಲ್ಲಿ 8 ಮಂದಿ ವಿದ್ಯಾರ್ಥಿಗಳು ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.
ಟಾಪ್ 10ರಲ್ಲಿರುವ ವಿದ್ಯಾರ್ಥಿಗಳು: ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ರತ್ಮಮ್ಮ ಎಂಬ ವಿದ್ಯಾರ್ಥಿನಿ 625 ಕ್ಕೆ 619 ಅಂಕ ಪಡೆಯುವ ಮೂಲಕ ಚಾಮರಾಜನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಸಿ ವಿ ಪ್ರಜನ್ ಮತ್ತು ಎಸ್ ಸಂಜನಾ 618, ಚಾಮರಾಜನಗರ ಆದರ್ಶ ವಿದ್ಯಾಲಯದ ಆರ್ಯ 617, ಗುಂಡ್ಲುಪೇಟೆಯ ನಿಸರ್ಗ ವಿದ್ಯಾನಿಕೇತನ ಶಾಲೆಯ ಯುಕ್ತಾ 616 ಅಂಕಗಳನ್ನು ಗಳಿಸಿದ್ದಾರೆ.
ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ನಂದಿನಿ, ಗುಂಡ್ಲುಪೇಟೆಯ ಕ್ರೈಸ್ಟ್ ಸಿಎಂಐ ಶಾಲೆಯ ಅಂಕಿತಾ ತಲಾ 615, ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಉಮ್ಮೇ ಜುಹಾ 614, ಗುಂಡ್ಲುಪೇಟೆ ಆದರ್ಶ ವಿದ್ಯಾಲಯದ ಅಹಲ್ಯಾ 613, ಕೊಳ್ಳೇಗಾಲ ಆದರ್ಶ ವಿದ್ಯಾಲಯದ ಆಫಿಯಾ 612 ಅಂಕ ಪಡೆಯುವ ಮೂಲಕ ಟಾಪ್ 10 ಸ್ಥಾನದಲ್ಲಿದ್ದಾರೆ. ಸರ್ಕಾರದ ಆದರ್ಶ ವಿದ್ಯಾಲಯದ 8 ಮಂದಿ ಟಾಪ್ 10 ರಲ್ಲಿ ಇದ್ದರೇ ಇಬ್ಬರು ವಿದ್ಯಾರ್ಥಿಗಳು ಮಾತ್ರ ಖಾಸಗಿ ಶಾಲೆಯವರಾಗಿದ್ದಾರೆ.
24 ಕ್ಕೆ ಕುಸಿತ ಕಂಡ ಜಿಲ್ಲೆ: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ 24ನೇ ಸ್ಥಾನ ಗಳಿಸಿದೆ.
ಪರೀಕ್ಷೆಗೆ ಹಾಜರಾದ 11655 ವಿದ್ಯಾರ್ಥಿಗಳ ಪೈಕಿ 8344 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 71.59ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ 94.37 ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 7ನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿತ್ತು. ಆದರೆ ಈ ಬಾರಿ 7ನೇ ಸ್ಥಾನದಿಂದ 24 ನೇ ಸ್ಥಾನಕ್ಕೆ ಕುಸಿಯುವ ಮೂಲಕ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದೆ.