ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದೇ ಆದರೆ, 5 ಗ್ಯಾರಂಟಿಗಳು 5 ವರ್ಷದ ತನಕ ಮುಂದುವರೆಯುತ್ತವೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
8 ತಿಂಗಳಲ್ಲೇ ಐದು ಗ್ಯಾರಂಟಿ ಜಾರಿ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಸರ್ಕಾರ ರಚನೆಯಾದ 8 ತಿಂಗಳಲ್ಲೇ 5 ಗ್ಯಾರಂಟಿಗಳನ್ನು ಈಡೇರಿಸಲಾಗಿದೆ. ಈ ಗ್ಯಾರಂಟಿ ಯೋಜನೆಗಳು 5 ವರ್ಷ ಮುಂದುವರೆಯಬೇಕೆಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯಗೆ ಶಕ್ತಿ : ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದಲ್ಲಿ ರಾಜಕೀಯವಾಗಿ ಸಿದ್ದರಾಮಯ್ಯಗೆ ಹೆಚ್ಚು ಶಕ್ತಿ ಬರಲಿದೆ. ಇನ್ನೂ 5 ವರ್ಷ ಬಡವರ ಪರ, ದಲಿತರ ಪರವಾಗಿ, ಮಹಿಳೆಯರ ಪರವಾಗಿ ದಿಟ್ಟವಾದ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತೆ. ರಾಜ್ಯದಲ್ಲಿ ಹೆಚ್ಚು ಅಭಿವೃದ್ದಿಗೆ ಸಹಕಾರಿ ಆಗುತ್ತೆ ಎಂದು ತಿಳಿಸಿದರು.
ರಾಜಕಾರಣ ಧರ್ಮ ಸೇರಿಸಬಾರದು. ರಾಜಕಾರಣಕ್ಕೆ ಧರ್ಮ ಸೇರಿಸಿದರೆ ಜನಪ್ರತಿನಿಧಿಗಳನ್ನು, ನಾಯಕರನ್ನು ಪ್ರಶ್ನೆ ಮಾಡಲು ಜನರು ಮರೆತು ಬಿಡುತ್ತಾರೆ. ಮೋದಿ ಕಾ ಗ್ಯಾರಂಟಿ ಎಂದು ಹೇಳಿಕೊಳ್ಳುತ್ತಿದ್ದಾರೆ. ದೇವಸ್ಥಾನ ಕಟ್ಟುವುದು ಸರ್ಕಾರದ ಕೆಲಸವೇ.? ದೇಗುಲ ನಿರ್ಮಾಣ ಒಂದು ಭಾಗವಷ್ಟೇ, ರಾಮ ಮಂದಿರ ನಿರ್ಮಾಣ ಮಾಡುವುದಲ್ಲ, ರಾಮರಾಜ್ಯ ನಿರ್ಮಾಣ ಮಾಡಬೇಕು ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಯತೀಂದ್ರನನ್ನು ನಿಂದಿಸಿದ್ದ ಕಿಡಿಗೇಡಿಯನ್ನು ಬಂಧಿಸಿದ ಪೊಲೀಸರು: ಗುಂಡ್ಲುಪೇಟೆ ಪಟ್ಟಣದ ಡಿ ದೇವರಾಜ ಅರಸು ಕ್ರೀಡಾಂಗಣದಲ್ಲಿ ಭಕ್ತ ಶ್ರೇಷ್ಠ ಕನಕದಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಕಿಡಿಗೇಡಿಯೊಬ್ಬನು ಸಮಾರಂಭದ ಹಿಂಬದಿಯಲ್ಲಿ ಬಂದು ಅವಾಚ್ಯ ಶಬ್ಧದಿಂದ ನಿಂದಿಸಿ ಪರಾರಿಯಾಗಿದ್ದ.
ಹಿಂಬದಿಯಿಂದ ಬಂದು ಯತೀಂದ್ರನನ್ನು ನಿಂದಿಸಿದ್ದಕ್ಕೆ ಕೆರಳಿದ ಕುರುಬ ಸಮುದಾಯ, ಕಿಡಿಗೇಡಿಯನ್ನು ತಕ್ಷಣ ಬಂಧಿಸುವಂತೆ ಈ ವೇಳೆ ಆಗ್ರಹಿಸಿತು. ಕೂಡಲೇ ಸಚಿವ ಭೈರತಿ ಸುರೇಶ್ ಪಿ ಎ ಅವರು ಪಿಎಸ್ಐಗೆ ಸೂಚಿಸಿ, ಆ ಕಿಡಿಗೇಡಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದರು. ಈ ನಡುವೆ ನಿಂದಿಸಿ ಪರಾರಿಯಾದ ರಂಜಿತ್ ಎಂಬಾತ ಮತ್ತೆ ಸಮಾರಂಭ ನಡೆಯುವ ಸ್ಥಳಕ್ಕೆ ಬಂದಾಗ ಪೊಲೀಸರು ಆತನನ್ನು ಬಂಧಿಸಿ, ಠಾಣೆಗೆ ಕರೆದೊಯ್ದರು.
ಇದನ್ನೂಓದಿ:ಲೋಕಸಭೆ ಚುನಾವಣೆಯಲ್ಲಿ ಬಿ ವೈ ರಾಘವೇಂದ್ರರನ್ನು ಗೆಲ್ಲಿಸುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಕರೆ