ಚಾಮರಾಜನಗರ: ಜಿಲ್ಲೆಯ ರೈತರ ಸಮಸ್ಯೆಗಳು ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು 150 ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಮಲೆಮಾದೇಶ್ವರ ಬೆಟ್ಟದಿಂದ ಚಾಮರಾಜನಗರದವರೆಗೆ ರೈತರು ಪಾದಯಾತ್ರೆ ಹಮ್ಮಿಕೊಂಡಿದ್ದು, ಮಂಗಳವಾರ ಮಾದಪ್ಪನ ಬೆಟ್ಟದಿಂದ ಕಾಲ್ನಡಿಗೆ ಆರಂಭಿಸಿದ್ದಾರೆ. ಜಿಲ್ಲಾ ರೈತರ ಪಾದಯಾತ್ರೆ ದಿನಕ್ಕೆ 50 ಕಿಲೋ ಮೀಟರ್ನಂತೆ ನಡೆದು ಜ.26 ರಂದು ಜರುಗಲಿರುವ ಗಣರಾಜ್ಯೋತ್ಸವ ದಿನ ಚಾಮರಾಜನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಬಂದು ಸೇರಲಿದೆ. ಅಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರೊಂದಿಗೆ ರೈತರ ಸಮಸ್ಯೆ ಬಗ್ಗೆ ಸಮಾಲೋಚನೆ ನಡೆಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಒತ್ತಾಯಿಸಲಿದ್ದಾರೆ.
ರೈತರ ಬೇಡಿಕೆಗಳೇನು? ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು, ಬೇಡಗಂಪಣ ಜನಾಂಗದವರಿಗೆ ಮೂಲ ಸೌಲಭ್ಯ ಕಲ್ಪಿಸುವುದು, ಬೆಟ್ಟದ ಸುತ್ತಮುತ್ತ ಬೆಳೆಯುವ ಎಲ್ಲ ತರಹದ ಕೃಷಿ ಉತ್ಪನ್ನಗಳಿಗೆ ಸರ್ಕಾರದಿಂದ ಘೋಷಿತ ದರದಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವುದು, ಮಾನವ ವನ್ಯಜೀವಿಗಳ ನಡುವಿನ ಸಂಘರ್ಷ ತಡೆ, ಮಳೆಯಾಶ್ರಿತ ಪ್ರದೇಶಕ್ಕೆ ವಿಶೇಷ ಮುತುವರ್ಜಿ ವಹಿಸಿ, ಘೋಷಿತ ಎಂಎಸ್‌ಪಿ ಬೆಲೆಕೊಟ್ಟು ಫಸಲು ಸಂಗ್ರಹಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಅಲ್ಲದೆ, ಚಾಮರಾಜನಗರ ಜಿಲ್ಲೆಯಾದ್ಯಂತ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಗಾರಿಕೆಯನ್ನು ತಕ್ಷಣ ನಿಲ್ಲಿಸುವುದು, ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನ ಉದ್ಯೋಗ ನೀಡುವುದು, ಮಲೆಮಾದೇಶ್ವರ ಬೆಟ್ಟ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಲಿಸುವಂತೆ ಆಗ್ರಹಿಸಿ ಜಿಲ್ಲಾ ರೈತರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಯಲ್ಲಿ ನೂರಾರು ರೈತ ಹೋರಾಟಗಾರರು ಭಾಗಿಯಾಗಿದ್ದಾರೆ.
ಜನಪ್ರತಿನಿಧಿಗಳಿಗೆ ತೀವ್ರ ತರಾಟೆ: ಪಾದಯಾತ್ರೆ ವೇಳೆ ರೈತ ಮುಖಂಡ ಹೊನ್ನೂರು ಪ್ರಕಾಶ್ ಅವರು ಮಾಧ್ಯಮ ಮೂಲಕ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು. ಹಳ್ಳಿಗಳಲ್ಲಿ ರೈತ ಸಮುದಾಯದವರು ನಾನಾ ಮೂಲ ಸಮಸ್ಯೆ ಎದುರಿಸುತ್ತಿದ್ದಾರೆ. ಜನರು ಕೆರೆಂಟು, ಬಸ್ ಸಮಸ್ಯೆ , ಕುಡಿವ ನೀರಿನ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆ ಎದುರಿಸುತ್ತಿರುವುದು ನಿಮಗೆ ಗೊತ್ತಿಲ್ಲವಾ? ರೈತ ಸಂಘದವರು ತಮಗೆ ತಿಳಿಸಬೇಕಾ? ನೀವು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದು, ಬಳಿಕ ನಗರಗಳಲ್ಲಿ ವಾಸಿಸುವ ಎಂಎಲ್ಎ, ಎಂಪಿಗಳು ಕುಟುಂಬ ಸಮೇತ ಹಳ್ಳಿಯಲ್ಲಿ ಒಂದರೆಡು ದಿನ ಬಂದು ಉಳಿಯಿರಿ. ಆಗ ಸಮಸ್ಯೆಗಳ ಬಗ್ಗೆ ಗೊತ್ತಾಗುತ್ತದೆ. ಒಂದು ದಿನವಾದರು ರೈತರ ಸಭೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.