ಬೆಂಗಳೂರು: ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಎರಡೂವರೆ ದಶಕಗಳ ಬಳಿಕ ಬಂಧಿಸುವಲ್ಲಿ ಜಯನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಲಾಬ್ ಖಾನ್ (50) ಎಂಬಾತನನ್ನು ರಾಮನಗರದಲ್ಲಿ ಸೆರೆಹಿಡಿಯಲಾಗಿದೆ.
20 ಜನವರಿ 1998ರಲ್ಲಿ 24ನೇ ವಯಸ್ಸಿನಲ್ಲಿದ್ದಾಗ ಜಯನಗರ 5ನೇ ಬ್ಲಾಕ್‌ನಲ್ಲಿ ವಸಂತ ಎಂಬ ಮಹಿಳೆಯ ಸರ ಕದ್ದಿದ್ದ ಈತ ನಂತರ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದ. ಕೃತ್ಯ ಎಸಗಿದ ಬಳಿಕ ಯಾವುದೇ ಬೇರೆ ಪ್ರಕರಣದಲ್ಲೂ ಭಾಗಿಯಾಗದೆ ರಾಮನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡು ನೆಲೆಸಿದ್ದ.
ಈ ಘಟನೆ ನಡೆದು 26 ವರ್ಷ ಕಳೆದರೂ ಆರೋಪಿ ಪತ್ತೆಯಾಗದ ಕಾರಣ ಪ್ರಕರಣ ಕೈಬಿಡಲು ಪೊಲೀಸರು ನಿರ್ಧರಿಸಿದ್ದರು. ಆದರೆ ಪತ್ತೆಯಾಗದ ಹಳೆಯ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಜಯನಗರ ಪೊಲೀಸರು ಅಂತಿಮ ಪ್ರಯತ್ನದಲ್ಲಿ ಆರೋಪಿಯ ಜಾಡು ಬೆನ್ನತ್ತಿ ಹೊರಟಿದ್ದರು. ಆಗ ರಾಮನಗರದಲ್ಲಿ ನೆಲೆಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮರು ತನಿಖೆ ನಡೆಯುತ್ತಿದ್ದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಇತ್ತೀಚಿನ ಪ್ರಕರಣ: ಕಾಲು ನೋವಿಗೆ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬಂದಿದ್ದ ಯುವಕನೊಬ್ಬ ವೃದ್ದೆಯ ಕತ್ತುಕೊಯ್ದು ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಆನೇಕಲ್ ಪಟ್ಟಣದ ಲಕ್ಷ್ಮಿ ಟಾಕೀಸ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಕ್ಕಯ್ಯಮ್ಮ ಎಂಬ ವೃದ್ದೆ ಹಾಗೂ ಪತಿ ನಾರಾಯಣಾಚಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಕಯ್ಯಮ್ಮ ಹಾಗೂ ನಾರಾಯಣಾಚಾರಿ ಇಬ್ಬರೂ ಕಾಲು, ಕೈ ಉಳುಕಿದ್ದರೆ ಮಂತ್ರ ಹಾಕುತ್ತಿದ್ದರು. ಹೀಗಾಗಿ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬೆಳಿಗ್ಗೆ ಮನೆಗೆ ನುಗ್ಗಿದ ದುಷ್ಕರ್ಮಿ ವೃದ್ಧೆಯ ಕತ್ತನ್ನು ಕುಡಗೋಲಿನಿಂದ ಕೊಯ್ದು ಚಿನ್ನದ ಸರ ಕಳ್ಳತನ ಮಾಡಿದ್ದನು. ಆರೋಪಿ ಎರಡೆಳೆ ಚಿನ್ನದ ಮಾಂಗಲ್ಯ ಸರದೊಂದಿಗೆ 120 ಗ್ರಾಂ ಚಿನ್ನಾಭರಣ ದೋಚಿದ್ದನು. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ, ಕಚೇರಿ ಮೇಲೆ ಇಡಿ ದಾಳಿ